ಶಿರೂರು ಶ್ರೀ ಹೆಸರಲ್ಲಿ ಮತ್ತೊಂದು ವಿವಾದ

By Web DeskFirst Published Jul 27, 2018, 8:32 AM IST
Highlights

ಶಿರೂರು ಶ್ರೀ ಹೆಸರಲ್ಲಿ ಇದೀಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಅವರು ಬ್ರಹ್ಮಚರ್ಯವನ್ನು ಪಾಲಿಸಿರಲಿಲ್ಲ. ಆದ್ದರಿಂದ ಅವರಿಗೆ ವೃಂದಾವನ ನಿರ್ಮಾಣ ಆಗಬೇಕೋ ಬೇಡವೋ ಎನ್ನುವ ವಿವಾದ ಎದುರಾಗಿದೆ. 

ಬೆಂಗಳೂರು :  ಶಿರೂರು ಮಠದ ಶ್ರೀಲಕ್ಷ್ಮೀ ವರ ತೀರ್ಥ ಸ್ವಾಮೀಜಿ ಅವರು ಸನ್ಯಾಸ ಧರ್ಮ ವನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಅವರನ್ನು ಉಡುಪಿಯ ಇತರ ಮಠಾಧೀಶರು ಸನ್ಯಾಸಿಯೇ ಅಲ್ಲ, ಉಡುಪಿಯ ಅಷ್ಟ ಮಠಾಧೀಶರಲ್ಲಿ ಒಬ್ಬರಲ್ಲ ಎಂದು ತೀರ್ಮಾಸಿದ್ದರು. ಈ ಹಿನ್ನೆಲೆಯಲ್ಲಿ ಈಗ ಶಿರೂರು ಸ್ವಾಮೀಜಿ ಅವರ ವೃಂದಾವನದ ನಿರ್ಮಾಣದ ಬಗ್ಗೆ ಸಂಶಯಗಳು ವ್ಯಕ್ತವಾಗಿವೆ.

ಸಂಪ್ರದಾಯದಂತೆ ಮಠಾಧೀಶರು ನಿಧನರಾದಾಗ ಅವರನ್ನು ಪದ್ಮಾಸನ ರೂಪದಲ್ಲಿ ಕೂರಿಸಿ ಸಮಾಧಿ ಮಾಡಿ, ನಂತರ 12ನೇ ದಿನಕ್ಕೆ ಗುರು ಆರಾಧನೆಯನ್ನು ನೆರವೇರಿಸಿ, ಸಮಾಧಿ ಸ್ಥಳದಲ್ಲಿ ಕಲ್ಲಿನ ವೃಂದಾವನವನ್ನು ನಿರ್ಮಿಸಲಾಗುತ್ತದೆ. ಆದರೆ ಶಿರೂರು ಶ್ರೀಗಳು ಮದ್ಯ- ಮಾನಿನಿಯರ ಸಂಗದಿಂದ ಬ್ರಹ್ಮಚರ್ಯ ಕಳೆದು ಕೊಂಡಿದ್ದು, ಅವರು ಸನ್ಯಾಸಿಯೇ ಆಗಿರಲಿಲ್ಲ ಎಂದು ಸ್ವತಃ ಪೇಜಾವರ ಶ್ರೀಗಳೇ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದೇ ಕಾರಣಕ್ಕೆ ಇತರ ಮಠಾಧೀಶರು ಶಿರೂರು ಶ್ರೀಗಳಿಗೆ ಅವರ ಪಟ್ಟದ ದೇವರನ್ನು ನೀಡಲು ನಿರಾಕರಿಸಿದ್ದರು. 

ಅವರು ಪೀಠ ಬಿಟ್ಟು ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂದು ಪಟ್ಟು ಹಿಡಿದಿದ್ದರು. ಮಠಾಧೀಶರಿಗೆ ಬೇರೆ ಮಠಾಧೀಶರು ನಿಧನರಾದಾಗ ಅವರ ಮುಖ ದರ್ಶನ ಮಾಡಬಹುದು, ಆದರೆ ಮಠಾಧೀಶರಲ್ಲದವರು ನಿಧರಾದಾಗ ಅವರ ಮುಖದರ್ಶನಕ್ಕೆ ಅವಕಾಶ ಇಲ್ಲ. ಅದೇ ಕಾರಣಕ್ಕೆ ಶಿರೂರು ಸ್ವಾಮೀಜಿ ನಿಧನರಾದಾಗ ಉಡುಪಿಯ ಇತರ ಮಠಾಧೀಶರು ಅವರ ಮುಖದರ್ಶನಕ್ಕೂ ಆಗಮಿಸಿರಲಿಲ್ಲ. ಸಮಾಧಿ ಮಾಡಿದ ಮೇಲೆ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿದ್ದರು. 

ಈ ಎಲ್ಲಾ ಹಿನ್ನೆಲೆಯಲ್ಲಿ ಸನ್ಯಾಸಧರ್ಮವನ್ನು ಪಾಲಿಸದ, ಮಠಾಧೀಶರ ಸ್ಥಾನಮಾನ ನಿರಾಕರಿಸಲ್ಪಟ್ಟ ಶಿರೂರು ಸ್ವಾಮೀಜಿ ಅವರಿಗೆ ವೃಂದಾವನ ನಿರ್ಮಾಣ ಸರಿಯೇ ಎಂಬ ಬಗ್ಗೆ ಇತರ ಮಠಗಳ ವಿದ್ವಾಂಸರಲ್ಲಿ ಚರ್ಚೆಗಳು ಆರಂಭವಾಗಿವೆ. ಜೊತೆಗೆ ಉಡುಪಿಯ ಅಷ್ಟ ಮಠಗಳ ಇತಿಹಾಸದಲ್ಲಿ ವಿಷಪ್ರಾಶನ ಮಾಡಿದ ಮತ್ತು ಮರಣೋತ್ತರ ಪರೀಕ್ಷೆಗೊಳಗಾದ ಮೊದಲ ಸ್ವಾಮೀಜಿ ಶಿರೂರು ಶ್ರೀಗಳು. 

ಇದೇ  ಕಾರಣಕ್ಕೆ ಅವರು ನಿಧನರಾದ ದಿನ ಅವರ ಪಾರ್ಥಿವ ಶರೀರವನ್ನು ಉುಡುಪಿಯ ರಥಬೀದಿಗೆ ತರಬಾರದು ಎಂದು ಒಂದು ವರ್ಗ ಬಲವಾಗಿ  ಪಟ್ಟು ಹಿಡಿದಿತ್ತು. ನಂತರ ಉಡುಪಿ ಶಾಸಕರ ಸಂಧಾನದ ಮೂಲಕ ಸೋದೆ ಶ್ರೀಗಳನ್ನು ಒಪ್ಪಿಸಿ ಪ್ರಾರ್ಥಿವ ಶರೀರವನ್ನು ರಥಬೀದಿಗೆ ತರಲಾಗಿತ್ತು. ಈಗ ಶಿರೂರು ಶ್ರೀಗಳ ಅರಾಧನೆ ಜು.೩೦ರಂದು ನಡೆಯಬೇಕಾಗಿದೆ. ನಂತರ ವೃಂದಾವನ ನಿರ್ಮಾಣವಾಗಬೇಕಾಗಿದೆ.

click me!