
ಬೆಂಗಳೂರು : ನಿವೃತ್ತ ಅಥವಾ ಹುತಾತ್ಮ ಯೋಧರ ಕುಟುಂಬಗಳಿಗೆ ಮೂರು ತಿಂಗಳೊಳಗೆ ಪರಿಹಾರ ಹಾಗೂ ಇತರೆ ಸೌಲಭ್ಯ ಒದಗಿಸಲು ರಾಜ್ಯಸರ್ಕಾರ ಹೊಸ ಕಾನೂನು ರೂಪಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದರು.
ನಗರದ ರಾಷ್ಟ್ರೀಯ ಸೈನಿಕ ಸ್ಮಾರಕ ದಲ್ಲಿ ಗುರುವಾರ ಆಯೋಜಿಸಿದ್ದ ‘ಕಾರ್ಗಿಲ್ ವಿಜಯೋತ್ಸವ’ ಹಾಗೂ ‘ಹುತಾತ್ಮ ಯೋಧರಿಗೆ ಗೌರವ ಸಮರ್ಪಣಾ’ ದಿನಾಚರಣೆ ಸಮಾರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ದೇಶ ಕಾಯುವ ಯೋಧರಿಗೆ ಸರ್ಕಾರ ನೀಡುವ ಪರಿಹಾರ ವಿಳಂಬವಾಗಬಾ ರದು. ಈ ಉದ್ದೇಶದಿಂದ ರಾಜ್ಯಸರ್ಕಾರ ನಿವೃತ್ತ ಅಥವಾ ಹುತಾತ್ಮ ಯೋಧರ ಕುಟುಂಬಕ್ಕೆ ಮೂರು ತಿಂಗಳ ಕಾಲಾವಧಿಯಲ್ಲಿ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳು ದೊರೆಯುವಂತೆ ಹೊಸ ಕಾನೂನು ರೂಪಿಸುತ್ತಿದೆ ಎಂದು ಹೇಳಿದರು.
1999 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ 500 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಅವರ ಸೇವೆ ಹಾಗೂ ತ್ಯಾಗ ಯುವ ಪೀಳಿಗೆಗೆ ಆದರ್ಶ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸಾಕಷ್ಟು ಯೋಧರು ನಮ್ಮೊಟ್ಟಿಗಿದ್ದು, ಅವರಿಗೂ ಕೃತಜ್ಞತೆ ಸಲ್ಲಿಸಲಾಗುತ್ತಿದೆ ಎಂದರು. ಹುತಾತ್ಮ ಯೋಧರ ಕುಟುಂಬಸ್ಥರೊಂದಿಗೆ ಸಭೆ: ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆಯ ನಿರ್ದೇಶಕ ಎಸ್.ಬಿ.ಸಜ್ಜನ್ ಹಾಗೂ ಉಪನಿರ್ದೇಶಕ ಶಿವಾನಂದ ನಾಯಕ್ ಅವರು ಕಾರ್ಗಿಲ್‌ನಲ್ಲಿ ಹುತಾತ್ಮರಾದ ಯೋಧರ ಕುಟುಂಬದ ಸದಸ್ಯರೊಂದಿಗೆ ಸಭೆ ನಡೆಸಿದರು. ಈ ವೇಳೆ ಬಾದಾಮಿ, ಕುಷ್ಟಗಿ, ಬಾಗಕೋಟೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಯೋಧರ ಕುಟುಂಬಸ್ಥರು ಉದ್ಯೋಗ, ಭೂಮಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದ ಸರ್ಕಾರ ಯಾವುದನ್ನೂ ನೀಡಿಲ್ಲ ಎಂದು ಅಳಲು ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ನಿರ್ದೇಶಕ ಎಸ್.ಬಿ ಸಜ್ಜನ್, ಸಮಸ್ಯೆ ಪರಿಹಾರಕ್ಕೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಭಾವಪೂರ್ಣ ಶ್ರದ್ಧಾಂಜಲಿ: ಕಾರ್ಗಿಲ್‌ನಲ್ಲಿ ಹುತಾತ್ಮರಾದ ಯೋಧರ ಕುಟುಂಬಸ್ಥರು ಸೈನಿಕ ಸ್ಮಾರಕ ಭವನಕ್ಕೆ ಆಗಮಿಸಿ ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಂಜೀವ್ ನರೈನ್, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು, ನಿವೃತ್ತ ಏರ್ ಕಮೋಡೊರ್ ಎಂ.ಕೆ. ಚಂದ್ರಶೇಖರ್, ಪ್ಯಾರಾ ರೆಜಿಮೆಂಟ್, ಸೆಂಟ್ರಲ್ ಕಮಾಂಡೆಂಟ್ಸ್, ಎನ್‌ಸಿಸಿ ಸೇರಿದಂತೆ ಯೋಧರು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.