ಪಾಕಿಸ್ತಾನದಲ್ಲಿ ಭಾರತದ ಇಬ್ಬರು ಮೌಲ್ವಿಗಳ ಬಂಧನ?

By Suvarna Web DeskFirst Published Mar 17, 2017, 4:09 PM IST
Highlights

ಮೌಲ್ವಿಗಳ ನಾಪತ್ತೆ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ಸಂಬಂಧ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.

ನವದೆಹಲಿ(ಮಾ. 17): ಭಾರತದ ಇಬ್ಬರು ಮುಸ್ಲಿಂ ಧರ್ಮ ಗುರುಗಳು ಪಾಕಿಸ್ತಾನದಲ್ಲಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ಹಿಂದೆ ಪಾಕ್ ಗುಪ್ತಚರ ಸಂಸ್ಥೆಗಳ ಕೈವಾಡವಿದೆ ಅಂತ ಗೊತ್ತಾಗಿದೆ. ಕೆಲ ವರದಿಗಳ ಪ್ರಕಾರ, ಪಾಕ್'ನ ಗುಪ್ತಚರ ಸಂಸ್ಥೆಗಳು ಸಯ್ಯದ್ ಅಸಿಫ್ ಅಲಿ ನಿಜಾಮಿ ಮತ್ತು ನಜಿಮ್ ನಿಜಾಮಿ ಅವರನ್ನು ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ.

ಯಾಕಾಗಿ ಬಂಧನ?
ಹಜರತ್ ನಿಜಾಮುದ್ದೀನ್ ದರ್ಗಾದ ಧರ್ಮಗುರು ಸಯ್ಯದ್ ಆಸಿಫ್ ಅಲಿ ನಿಜಾಮಿ ಮತ್ತು ಸೂಫಿ ಧರ್ಮಗುರು ನಜಿಮ್ ನಿಜಾಮಿ ಅವರು ತಮ್ಮ ಸಂಬಂಧಿಗಳನ್ನು ಭೇಟಿ ಮಾಡಲು ಕರಾಚಿಗೆ ತೆರಳಿದ್ದರು. ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದಾರೆ. ಲಾಹೋರ್'ನ ದತ್ತ ದರ್ಬಾರ್ ಸೂಫಿ ಮಂದಿರದಲ್ಲಿ ಇಬ್ಬರು ಕಾಣಿಸಿದ್ದೇ ಕೊನೆ.

ಇದರ ಹಿಂದೆ ಪಾಕ್​ ಗುಪ್ತಚರ ಸಂಸ್ಥೆಗಳ ಪಾತ್ರವಿದೆ ಅನ್ನೋ ಮಾತುಗಳು ಕೇಳಿ ಬರ್ತಿದೆ. ಆದರೆ, ಪಾಕಿಸ್ತಾನದ ಅಧಿಕಾರಿಗಳು ಹೇಳುವ ಪ್ರಕಾರ ಅಸಿಫ್ ಅವರಿಗೆ ಕರಾಚಿಗೆ ಹೋಗಲು ಅನುಮತಿ ಕೊಡಲಾಗಿದೆ. ಸೂಫಿ ಧರ್ಮಗುರುವನ್ನು ಏರ್'ಪೋರ್ಟ್'ನಲ್ಲೇ ತಡೆಹಿಡಿಯಲಾಗಿದೆ. ಅವರು ಎಲ್ಲಿ ಹೋಗಿದ್ದಾರೆಂಬುದು ತಮಗೆ ಗೊತ್ತಿಲ್ಲವೆಂದು ಪಾಕಿಸ್ತಾನ ಹೇಳುತ್ತಿದೆ.

ಮೌಲ್ವಿಗಳ ನಾಪತ್ತೆ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣ ಸಂಬಂಧ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇಬ್ಬರು ಭಾರತೀಯರ ಕುರಿತ ಮಾಹಿತಿ ಹಾಗೂ ವರದಿಗಳನ್ನು ನವದೆಹಲಿಗೆ ನೀಡುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಲಾಗಿದೆ ಅಂತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

click me!