ಕೊಲೆ ಕೇಸ್‌ಗೆ ಟ್ವಿಸ್ಟ್‌: ತಂದೆಗೆ ನಿದ್ದೆ ಮಾತ್ರೆ ಕೊಟ್ಟ ಮಗಳು, ಇರಿದು ಕೊಂದ ಪ್ರಿಯತಮ!

By Web Desk  |  First Published Aug 20, 2019, 8:51 AM IST

ಪ್ರೀತಿಗೆ ಅಡ್ಡಿಯಾದ ತಂದೆಯನ್ನೇ ಕೊಂದಳು!| ರಾಜಾಜಿನಗರದಲ್ಲಿ ನಡೆದಿದ್ದ ಬಟ್ಟೆವ್ಯಾಪಾರಿ ಕೊಲೆ ಕೇಸ್‌ಗೆ ತಿರುವು| ಪ್ರಿಯಕರನ ಜತೆ ಸೇರಿ ಬಾಲಕಿ ಘೋರ ಕೃತ್ಯ| ತಂದೆಗೆ ನಿದ್ರೆ ಮಾತ್ರೆ ಕೊಟ್ಟು ಕೊಲೆಗೆ ಸಹಕಾರ| ಗಾಢ ನಿದ್ರೆಯಲ್ಲಿದ್ದ ಪ್ರೇಯಸಿಯ ತಂದೆಯ ಇರಿದು ಕೊಂದ ಪ್ರಿಯತಮ| ಬೆಂಕಿ ಹಚ್ಚಿ ಕೊಲೆಯೆಂದು ಬಿಂಬಿಸಲು ಯತ್ನ| ಕೊನೆಗೆ ಸತ್ಯ ಬಾಯ್ಬಿಟ್ಟಬಾಲಕಿ


ಬೆಂಗಳೂರು[ಆ.20]: ರಾಜಾಜಿನಗರದಲ್ಲಿ ಬಟ್ಟೆಮಳಿಗೆ ಮಾಲೀಕನನ್ನು ಹತ್ಯೆ ಮಾಡಿ, ಸ್ನಾನದ ಕೋಣೆಯಲ್ಲಿ ಬೆಂಕಿ ಹಚ್ಚಿದ್ದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಆತನ ಅಪ್ರಾಪ್ತ ಪುತ್ರಿಯೇ ಪ್ರಿಯಕರನ ಜತೆಗೂಡಿ ಕೊಲೆ ಮಾಡಿದ್ದಳು ಎಂಬ ಅಂಶ ಪೊಲೀಸ್‌ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ಸಂಬಂಧ ಕೊಲೆಯಾದ ಜೈಕುಮಾರ್‌ (41) ಅವರ ಹದಿನೈದು ವರ್ಷದ ಪುತ್ರಿ ಹಾಗೂ ಈಕೆಯ ಪ್ರಿಯಕರ ಪ್ರವೀಣ್‌ ಕುಮಾರ್‌ (18) ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ತಮ್ಮ ಪ್ರೀತಿಗೆ ತಂದೆ ಅಡ್ಡಿಯಾಗಿದ್ದರು ಎಂಬ ಕಾರಣಕ್ಕೆ ಹತ್ಯೆ ಮಾಡಿದ್ದಾರೆ. ಘಟನೆ ವೇಳೆ ಆರೋಪಿಗಳ ಕೈ-ಕಾಲಿಗೆ ಸುಟ್ಟಿದ ಗಾಯಗಳಾಗಿವೆ ಎಂದು ಡಿಸಿಪಿ ಶಶಿಕುಮಾರ್‌ ತಿಳಿಸಿದರು.

Tap to resize

Latest Videos

ಜೈಕುಮಾರ್‌ ರಾಜಾಜಿನಗರದಲ್ಲಿ ಸ್ವಂತ ಬಟ್ಟೆಮಳಿಗೆ ಹೊಂದಿದ್ದು, ಪತ್ನಿ, ಪುತ್ರಿ ಹಾಗೂ ಪುತ್ರನ ಜತೆ ನೆಲೆಸಿದ್ದರು. ಪುತ್ರಿ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಬಾಲಕಿ ವ್ಯಾಸಂಗ ಮಾಡುತ್ತಿದ್ದ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದ, ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಪ್ರವೀಣ್‌ ಜತೆ ಸ್ನೇಹ ಹೊಂದಿದ್ದಳು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು.

ತಂದೆ ಕೊಲೆಗೆ ಸಮ್ಮತಿ:

ಪ್ರವೀಣ್‌ ಜತೆ ಬಾಲಕಿ ಮಾಲ್‌, ಸಿನಿಮಾ ಎಂದೆಲ್ಲಾ ಸುತ್ತಾಡುತ್ತಿದ್ದಳು. ಪುತ್ರಿ, ಯುವಕನೊಬ್ಬನ ಜತೆ ಓಡಾಡುತ್ತಿರುವ ವಿಷಯ ತಿಳಿದ ಜೈಕುಮಾರ್‌, ಬುದ್ಧಿಮಾತು ಹೇಳಿದ್ದರು. ಆದರೂ ಬಾಲಕಿ, ಪ್ರವೀಣ್‌ ಜತೆ ಸ್ನೇಹ ಮುಂದುವರೆಸಿದ್ದಳು. ಬಳಿಕ ಜೈಕುಮಾರ್‌ ಪುತ್ರಿಗೆ ತಾವು ಕೊಡಿಸಿದ್ದ ಮೊಬೈಲ್‌ ಫೋನ್‌ ಕಸಿದುಕೊಂಡು ಮನೆಯಲ್ಲಿಯೇ ಇರುವಂತೆ ತಾಕೀತು ಮಾಡಿದ್ದರು. ಆದರೆ, ಜೈಕುಮಾರ್‌ಗೆ ತಿಳಿಯದಂತೆ ಪ್ರವೀಣ್‌, ಬಾಲಕಿಗೆ ಮೊಬೈಲ್‌ ಕೊಡಿಸಿದ್ದ. ಇಬ್ಬರು ಯಾರಿಗೂ ಗೊತ್ತಾಗದಂತೆ ಮಾತುಕತೆ ಮುಂದುವರೆಸಿದ್ದರು. ತಂದೆ ಹೊರಗೆ ಕಳಿಸಲು ಅವಕಾಶ ನೀಡದಿರುವ ಬಗ್ಗೆ ಪ್ರಿಯಕರ ಬಳಿ ಹೇಳಿಕೊಂಡಿದ್ದಳು. ಇಷ್ಟಕ್ಕೆ ಆರೋಪಿ ಪ್ರವೀಣ್‌ ಪ್ರಿಯತಮೆಯ ತಂದೆಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ. ತಂದೆ ಹತ್ಯೆಗೆ ಪುತ್ರಿ ಕೂಡ ಒಪ್ಪಿದ್ದಳು.

ಟ್ಯೂಷನ್‌ ನೆಪದಲ್ಲಿ ಪ್ರಿಯಕರನ ಜತೆ ಸ್ಕೆಚ್‌:

ಇದರ ನಡುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತಾಯಿ ಹಾಗೂ ಸಹೋದರ ಶನಿವಾರ ರಾತ್ರಿ ಪುದುಚೇರಿಗೆ ಹೋಗುತ್ತಿರುವ ವಿಷಯ ಬಾಲಕಿಗೆ ತಿಳಿದಿತ್ತು. ಇದಕ್ಕೂ ಮುನ್ನ ಬಾಲಕಿ, ಪ್ರಿಯಕರನನ್ನು ಟ್ಯೂಷನ್‌ಗೆ ಹೋಗುವ ನೆಪದಲ್ಲಿ ಭೇಟಿಯಾಗಿದ್ದಳು. ಮನೆಯಲ್ಲಿ ಯಾರು ಇರುವುದಿಲ್ಲ ತಂದೆಯನ್ನು ಹತ್ಯೆ ಮಾಡಬಹುದು ಎಂದು ಆರೋಪಿಗೆ ಹೇಳಿದ್ದಳು. ಅದರಂತೆ ಔಷಧಿ ಮಳಿಗೆಯಲ್ಲಿ ನಿದ್ರೆ ಮಾತ್ರೆ ಖರೀದಿಸಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಳು. ಶನಿವಾರ ರಾತ್ರಿ ತಾಯಿ ಮತ್ತು ತಮ್ಮ ಪುದುಚೇರಿಗೆ ಹೊರಟ್ಟಿದ್ದವರನ್ನು ಪುತ್ರಿಯೇ ರೈಲು ನಿಲ್ದಾಣಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದಳು. ಮನೆಗೆ ಬಂದ ಬಾಲಕಿ ತಂದೆಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಹಾಲು ಕುಡಿದ ಜೈಕುಮಾರ್‌ ಗಾಢ ನಿದ್ರೆಗೆ ಜಾರಿದ್ದರು. ಇದಕ್ಕೂ ಮುನ್ನವೇ ಪ್ರಿಯರಕನಿಗೆ ಹೇಳಿದ್ದ ಬಾಲಕಿ ತಡರಾತ್ರಿ ಆತನನ್ನು ಮನೆಗೆ ಕರೆಯಿಸಿಕೊಂಡಿದ್ದಳು. ಮೊದಲೇ ಹೊಂಚು ಹಾಕಿದಂತೆ ಪ್ರವೀಣ್‌ ಅಂಗಡಿಯಿಂದ ಹೊಸ ಚಾಕು ಖರೀದಿಸಿ ತಂದಿದ್ದ. ನಿದ್ರೆಗೆ ಜಾರಿದ್ದ ಜೈಕುಮಾರ್‌ ಕುತ್ತಿಗೆ ಸೇರಿದಂತೆ ದೇಹದ ಹಲವು ಭಾಗಕ್ಕೆ ಆರೋಪಿಗಳು ಇರಿದು ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗೆಳೆಯನೊಂದಿಗೆ ಪಾರ್ಟಿ ಬೇಡ ಎಂದ ತಂದೆಯನ್ನೇ ಕೊಂದಳಾ 9ನೇ ತರಗತಿ ಪುತ್ರಿ?

ರಾತ್ರಿ ಇಡೀ ಸಂಚು:

ಹತ್ಯೆ ಮಾಡಿದ ಬಳಿಕ ಮೃತ ದೇಹವನ್ನು ಆರೋಪಿಗಳು ಸ್ನಾನದ ಕೋಣೆಗೆ ಎಳೆದೊಯ್ದು ಹಾಕಿದ್ದರು. ನಂತರ ರಕ್ತಸಿಕ್ತ ಬಟ್ಟೆಗಳನ್ನು ವಾಷಿಂಗ್‌ ಮಷಿನ್‌ಗೆ ಹಾಕಿ ಶುಚಿಗೊಳಿಸಿದ್ದರು. ರಕ್ತದ ಕಲೆಗಳು ಹೋಗದಿದ್ದಾಗ ಕೈಯಿಂದ ಶುಚಿಗೊಳಿಸಿದ್ದರು. ಮೃತದೇಹವನ್ನು ವಿಲೇವಾರಿ ಮಾಡುವ ಬಗ್ಗೆ ರಾತ್ರಿ ಇಡೀ ಯೋಚನೆ ಮಾಡಿರುವ ಆರೋಪಿಗಳು, ಪೆಟ್ರೋಲ್‌ ಸುರಿದು ಬೆಂಕಿ ಹಾಕಿ ಸುಟ್ಟು ಹಾಕಲು ನಿರ್ಧರಿಸಿದ್ದರು.

ಅದರಂತೆ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಆರೋಪಿ ಬಾಲಕಿ ತಿಂಡಿ ತರಲು ಹೋಟೆಲ್‌ಗೆ ಹೋಗಿದ್ದಳು. ಮಾರ್ಗ ಮಧ್ಯೆ ನೀರಿನ ಬಾಟಲಿ ಖರೀದಿಸಿ, ನೀರು ಚೆಲ್ಲಿ ಅದರಲ್ಲಿ ಪೆಟ್ರೋಲ್‌ ತುಂಬಿಸಿಕೊಂಡು ಬಂದಿದ್ದಳು. ನಂತರ ಇಬ್ಬರು ಸೇರಿ ಮೃತ ದೇಹದ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಕೆನ್ನಾಲಿಗೆ ಹೆಚ್ಚಾಗುತ್ತಿದ್ದಂತೆ ಮನೆಯಿಂದ ಹೊರಗೆ ಬಂದ ಬಾಲಕಿ ಮನೆಯೊಳಗೆ ಬೆಂಕಿ ಹತ್ತಿಕೊಂಡಿದೆ ಎಂದು ಕೂಗಾಡಿದ್ದಳು.

ಸ್ಥಳೀಯರು ಅಗ್ನಿಶಾಮಕದಳ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬೆಂಕಿ ನಂದಿಸಲು ಮುಂದಾದ ಸಿಬ್ಬಂದಿ ಮೃತದೇಹಕ್ಕೆ ಬೆಂಕಿ ಬಿದ್ದಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು. ಘಟನೆಯಲ್ಲಿ ಬಾಲಕಿಯ ಕೈ-ಕಾಲಿಗೆ ಬೆಂಕಿ ತಗುಲಿತ್ತು. ಜೈಕುಮಾರ್‌ ಪುತ್ರಿಯನ್ನು ಪೊಲೀಸರು ಪ್ರಶ್ನಿಸಿದಾಗ ತಿಂಡಿ ತರಲು ಹೋಟೆಲ್‌ಗೆ ಹೋಗಿದ್ದೆ. ಈ ವೇಳೆ ಅವಘಡ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದಳು. ತೀವ್ರ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಳು. ಸಾಕ್ಷ್ಯ ನಾಶಪಡಿಸಲು ಮೃತದೇಹಕ್ಕೆ ಬೆಂಕಿ ಹಚ್ಚಿದ ವೇಳೆ ಆರೋಪಿಗಳ ಕೈ-ಕಾಲಿಗೆ ಸುಟ್ಟಗಾಯಗಳಾಗಿವೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಕಿ ಹಚ್ಚಿದ ಬಳಿಕವೂ ಮನೆಯಲ್ಲಿಯೇ ಇದ್ದ!

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದಾಗ ಆರೋಪಿ ಪ್ರವೀಣ್‌ಗೆ ಕೂಡ ಬೆಂಕಿ ತಾಗಿದ್ದರಿಂದ ಆತನಿಗೂ ಸುಟ್ಟಗಾಯಗಳಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಮನೆಗೆ ಬರುವವರೆಗೂ ಅಲ್ಲಿಯೇ ಅವಿತಿಕೊಂಡಿದ್ದ ಪ್ರವೀಣ್‌, ಅಗ್ನಿಶಾಮಕ ಸ್ಥಳ ಸಿಬ್ಬಂದಿ ಬಂದ ಬಳಿಕ ಯಾರಿಗೂ ಗೊತ್ತಾಗದಂತೆ ಸಾರ್ವಜನಿಕರ ರೀತಿಯಲ್ಲಿ ಹೊರ ಹೋಗಿದ್ದ. ಪ್ರವೀಣ್‌ ಗಾಯಗೊಂಡು ಮನೆಯಿಂದ ಹೊರ ಬಂದಿದ್ದನ್ನು ಸ್ಥಳೀಯರು ಗಮನಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ.

ಇದಕ್ಕೂ ಮುನ್ನ ಆರೋಪಿಗಳು ಮೃತ ದೇಹವನ್ನು ಮೂಟೆ ಕಟ್ಟಿಹೊರಗಡೆ ಕೊಂಡೊಯ್ದು ನಿರ್ಜನ ಪ್ರದೇಶದಲ್ಲಿ ಬಿಸಾಡಲು ಸಂಚು ರೂಪಿಸಿದರು. ಆದರೆ, ಹೊರಗಡೆ ಒಯ್ಯುವಾಗ ಪೊಲೀಸರು ಪ್ರಶ್ನಿಸಿದರೆ ಸಿಕ್ಕಿ ಬೀಳುತ್ತೇವೆ ಎಂದು ಆ ಯೋಚನೆ ಕೈ ಬಿಟ್ಟಿದ್ದರು ಎಂದು ಹೇಳಿದ್ದಾರೆ.

click me!