
ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಎಲ್ಲ ರೀತಿಯಲ್ಲೂ ‘ಸ್ಮಾರ್ಟ್' ಆಗಲು ಸಜ್ಜಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ತುಮಕೂರನ್ನು ‘ಸ್ಮಾರ್ಟ್‌ಸಿಟಿ' ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದರಿಂದ ಮುಂದಿನ ಐದು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೂ.1 ಕೋಟಿ ಹಣ ಸಿಗಲಿದೆ. ಇದರ ಜೊತೆಗೆ ನಗರ ಪಾಲಿಕೆ, ನೀರು ಸರಬರಾಜು ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ.649 ಕೋಟಿ ಹಾಗೂ ಕೇಂದ್ರದ ಯೋಜನೆಯಿಂದ ರೂ.233 ಕೋಟಿ ಹಾಗೂ ಸ್ವಯಂಪ್ರೇರಿತ ಸರ್ಕಾರಿ ಹಾಗೂ ಸಾರ್ವಜನಿಕ ಸ್ವಾಮ್ಯದಿಂದ ರೂ.344 ಕೋಟಿ ಸೇರಿ ವಿವಿಧ ಮೂಲಗಳಿಂದ ಹಣ ಸಂಗ್ರಹಿಸುವ ಗುರಿ ಹೊಂದಿದೆ.
ಮುಂದಿನ ಐದು ವರ್ಷದಲ್ಲಿ ನಗರದಲ್ಲಿ ರೂ.2272 ಕೋಟಿ ವೆಚ್ಚದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿತಯಾರಿಸಿದ್ದು ಪ್ರಸ್ತಾವಟ ಜೊತೆಗೆ ಇದನ್ನು ಸಹ ಕಳುಹಿಸಿಕೊಡಲಿದೆ. ಸ್ಮಾರ್ಟ್‌ಸಿಟಿ ಘೋಷಣೆ ಹಿನ್ನೆಲೆಯಲ್ಲಿ ಈಗಾಗಲೇ ಸ್ಮಾರ್ಟ್‌ಸಿಟಿ ಪ್ರೈವೇಟ್ ಲಿಮಿಟೆಡ್ ಅಸ್ತಿತ್ವಕ್ಕೆ ಬಂದಿದ್ದು ವ್ಯವಸ್ಥಾಪಕ ನಿರ್ದೇಶಕ ಸೇರಿ 7 ಮಂದಿ ಸದಸ್ಯರ ಮಂಡಳಿ ರಚನೆಯಾಗಿದೆ.
ಮೊದಲು 950 ಎಕರೆಯಲ್ಲಿ ಅಭಿವೃದ್ಧಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಆರಂಭಿಕವಾಗಿ ತುಮಕೂರು ನಗರದ 4, 5, 8, 10, 14, 15, 16 ಹಾಗೂ 19 ವಾರ್ಡ್‌ಗಳ ವ್ಯಾಪ್ತಿಗೆ ಬರುವ 950 ಎಕರೆ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಸಿದ್ಧವಾಗಿದೆ. ಅದರ ಬಗ್ಗೆ ತುಮಕೂರು ಬಸ್ ನಿಲ್ದಾಣ ಬೆಂಗಳೂರು ಬಸ್ ನಿಲ್ದಾಣ ಮಾದರಿಯಲ್ಲಿ ಆಧುನೀಕರಣಗೊಳ್ಳುತ್ತಿದೆ. ಕನಿಷ್ಠ .200 ಕೋಟಿ ವೆಚ್ಚದಲ್ಲಿ ತುಮಕೂರು ಬಸ್ ನಿಲ್ದಾಣವನ್ನು ಪುನರ್ ನಿರ್ಮಿಸಲಾಗುವುದು. ಹಾಲಿ ಇರುವ ಬಸ್ ನಿಲ್ದಾಣ ಕಿಷ್ಕಿಂದೆಯಾಗಿದ್ದು ಬಸ್ ನಿಲ್ದಾಣದಲ್ಲೇ ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತಿದೆ. ಈ ಸಂಬಂಧ ಬಸ್ ನಿಲ್ದಾಣ ಹೇಗೆ ಇರಬೇಕೆಂದು ಪ್ರಸ್ತಾವ ಕೂಡ ಸಿದ್ಧವಾಗಿದೆ.
ಸಿಟಿ ಬಸ್ ನಿಲ್ದಾಣಕ್ಕೂ ಜಾಗ: ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದಲ್ಲಿ ಇರುವ 2 ಎಕರೆ ಸರ್ಕಾರಿ ಜಾಗವನ್ನು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸುವ ಚರ್ಚೆ ಆರಂಭವಾಗಿದೆ. ಕೆಎಸ್‌ಆರ್‌ಟಿಸಿ ಯವರು ನಾಮಿನಲ್ ಹಣ ಕಟ್ಟಿಸಿಕೊಂಡು ಜಾಗ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಮಹಾನಗರ ಪಾಲಿಕೆ ಭೂಮಿಗೆ ಮಾರುಕಟ್ಟೆಯಲ್ಲಿ ಇರುವ ದರದ ರೀತಿ ನೀಡುವಂತೆ ಪಟ್ಟು ಹಿಡಿದಿದ್ದರು. ಈಗ ಜಿಲ್ಲಾಡಳಿತ, ಸ್ಥಳೀಯ ಶಾಸಕರು, ಸಂಸದರು ಒಟ್ಟಿಗೆ ಕೂತು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಹಣ ನೀಡಿ ಕೆಎಸ್‌ಆರ್‌ಟಿಸಿಗೆ 2 ಎಕರೆ ಜಾಗ ನೀಡಲು ಚರ್ಚೆ ನಡೆಸಿದ್ದಾರೆ.
ಹೈಟೆಕ್ ಆಗಲಿದೆ ಸಿಗ್ನಲ್: ಸದ್ಯ ತುಮಕೂರಿನಲ್ಲಿ ಟೌನ್‌ಹಾಲ್, ಜಿಲ್ಲಾಧಿಕಾರಿಗಳ ಕಚೇರಿ ಸರ್ಕಲ್, ಶಿವಕುಮಾರ ಸ್ವಾಮೀಜಿ ಸರ್ಕಲ್, ಭದ್ರಮ್ಮ ವೃತ್ತದ ಬಳಿ ಸಿಗ್ನಲ್ ಇದ್ದು ಸ್ಮಾರ್ಟ್‌ಸಿಟಿ ಯೋಜನೆಯಡಿ ಇನ್ನು ಐದು ಕಡೆ ಡಿಜಿಟಲ್ ಸಿಗ್ನಲ್ ಲೈಟ್ ಅಳವಡಿಸಲಾಗುವುದು.
ದಿನೇ ದಿನೇ ಬೆಳೆಯುತ್ತಿರುವ ತುಮಕೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ದೊಡ್ಡ ಪಿಡುಗಾಗಿದ್ದು ತುಮಕೂರಿನ ಎಂ.ಜಿ. ರಸ್ತೆ ಮತ್ತು ಸಿದ್ಧಿವಿನಾಯಕ ಮಾರುಕಟ್ಟೆಬಳಿ ಕಾರ್ ಪಾರ್ಕಿಂಗ್ ಜೋನ್ ಮಾಡಲು ನಿರ್ಧರಿಸಲಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಕಾರ್ ಪಾರ್ಕಿಂಗ್ ಮಾದರಿಯನ್ನೇ ತುಮಕೂರಿಗೂ ಅಳವಡಿಸಲಾಗುವುದು.
ಸ್ವಚ್ಛ ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ವಚ್ಛ ತುಮಕೂರಿಗೆ ಆದ್ಯತೆ ನೀಡಿದ್ದು ಅಜ್ಜಗೊಂಡನಹಳ್ಳಿಯಲ್ಲಿ .8.5 ಕೋಟಿ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಖರೀದಿಸಲಿದ್ದು ಗೋವಾ ಮಾದರಿಯಲ್ಲಿ ಕಸವನ್ನು ವಿಲೇವಾರಿ ಮಾಡಲು ಚಿಂತನೆ ನಡೆಸಲಾಗಿದೆ. ಅಲ್ಲದೇ ತುಮಕೂರಿನ ಕೆಲವು ಕಡೆ ಆಧುನಿಕ ಪಬ್ಲಿಕ್ ಟಾಯ್ಲೆಟ್ ನಿರ್ಮಿಸಲಿದೆ. ಅಲ್ಲದೇ ಅಮಾನಿಕೆರೆ ಹಾಗೂ ಮರಳೂರು ಕೆರೆ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ.
ಸದ್ಯ ತುಮಕೂರಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇದ್ದು ಮತ್ತೊಂದು ಲೈಬ್ರರಿ ನಿರ್ಮಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಮಾರಿಯಮ್ಮ ನಗರದ ನಿವಾಸಿಗಳು ಜಾಗ ಬಿಟ್ಟುಕೊಟ್ಟರೆ ದಿಬ್ಬೂರಿನಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯದಂತೆ ಮಾರಿಯಮ್ಮ ನಗರದಲ್ಲೂ ನಿರ್ಮಿಸಲು ಉದ್ದೇಶಿಸಲಾಗಿದೆ.
ಅಮಾನಿಕೆರೆ ಮತ್ತಷ್ಟುಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಯೋಜನೆ ರೂಪಿಸಲಾಗಿದೆ. ಇದಲ್ಲದೇ ಅಮಾನಿಕೆರೆ ಸುತ್ತಮುತ್ತ 25 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡುವುದರ ಮೂಲಕ ಸ್ವಚ್ಛ ತುಮಕೂರಿಗೆ ಆದ್ಯತೆ ನೀಡಲು ಪ್ರಸ್ತಾವ ಸಿದ್ಧವಾಗಿದೆ.
ಸಿಸಿ ಟಿವಿ: ತುಮಕೂರು ನಗರದಲ್ಲೆಡೆ ಸಿಸಿ ಟಿವಿ ಅಳವಡಿಸಲು ಯೋಜನೆ ರೂಪಿಸಲಾಗಿದೆ. ತುಮಕೂರು ನಗರದ ಶೇ.80ರಷ್ಟುಭಾಗಗಳಲ್ಲಿನ ಜನರ ಚಲನ ವಲನಗಳನ್ನು ಈ ಸಿಸಿ ಟಿವಿ ಸೆರೆ ಹಿಡಿಯಲಿದೆ. ಇದರ ಜೊತೆಗೆ ತುಮಕೂರು ನಗರದ 25 ಪಾರ್ಕ್ಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸ ಲಾಗುವುದು.
ವೈಫೈ ಸೇರಿದಂತೆ ತುಮಕೂರು ನಗರದ ಜನರ ಅನುಕೂಲಕ್ಕಾಗಿ 25 ಮಿನಿ ಬಸ್‌ಗಳನ್ನು ಖರೀದಿಸಲು ವಿಶೇಷ ಆದ್ಯತೆಯನ್ನು ಸ್ಮಾರ್ಟ್‌ಸಿಟಿಯಲ್ಲಿ ಅಳವಡಿ ಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.