ಭಾರತಕ್ಕೆ ಶಾಕ್ ಕೊಟ್ಟ ಟ್ರಂಪ್ : ಯಾಕೀ ನಿರ್ಧಾರ..?

By Web DeskFirst Published Nov 3, 2018, 11:59 AM IST
Highlights

ಎಹ್ 1 ಬಿ ವೀಸಾ ಸೇರಿದಂತೆ ವಿವಿಧ ವಿಚಾರಗಳಿಗೆ ಪದೇ ಪದೇ ಸಮಸ್ಯೆ ತಂದೊಡ್ಡುವ ಟ್ರಂಪ್ ಇದೀಗ ಮತ್ತೊಮ್ಮೆ ಭಾರತಕ್ಕೆ ಆತಂಕ ತಂದಿಟ್ಟಿದ್ದಾರೆ. 

ವಾಷಿಂಗ್ಟನ್‌: ಕರ್ನಾಟಕದಲ್ಲಿ ಪ್ರಮುಖವಾಗಿ ಬೆಳೆಯಲಾಗುವ ಅಡಕೆ, ಮಾವು ಹಾಗೂ ತೊಗರಿ ಸೇರಿದಂತೆ ಭಾರತದ 50 ಉತ್ಪನ್ನಗಳಿಗೆ ಈವರೆಗೆ ನೀಡಲಾಗುತ್ತಿದ್ದ ಸುಂಕ ವಿನಾಯಿತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಿಂಪಡೆದಿದ್ದಾರೆ. 

ಇನ್ನು ಮುಂದೆಯೂ ಈ ಐವತ್ತು ಉತ್ಪನ್ನಗಳನ್ನು ಭಾರತವು ಅಮೆರಿಕಕ್ಕೆ ರಫ್ತು ಮಾಡಲು ಯಾವುದೇ ಅಡ್ಡಿ ಇಲ್ಲ. ಆದರೆ ಆ ಉತ್ಪನ್ನಗಳಿಗೆ ಸುಂಕ ಪಾವತಿಸಬೇಕಾಗುತ್ತದೆ.

ವ್ಯಾಪಾರ ಸಂಬಂಧಿ ವಿಷಯಗಳ ಕುರಿತಾಗಿ ಭಾರತದ ಜತೆ ಸಂಘರ್ಷಕ್ಕೆ ಇಳಿದಿರುವ ಟ್ರಂಪ್‌ ಸರ್ಕಾರದ ಈ ನಿರ್ಧಾರದಿಂದಾಗಿ ಈವರೆಗೂ ತೆರಿಗೆ ವಿನಾಯಿತಿ ಸೌಲಭ್ಯದ ಮೂಲಕ ಅಮೆರಿಕ ತಲುಪುತ್ತಿದ್ದ ವಸ್ತುಗಳು ತೆರಿಗೆ ಕಟ್ಟಬೇಕಾಗುತ್ತದೆ. ಅತ್ಯಂತ ನೆಚ್ಚಿನ ರಾಷ್ಟ್ರ ಸ್ಥಾನಮಾನವನ್ನು ಹೊಂದಿರುವ ದೇಶಗಳಿಗೆ ಎಷ್ಟುತೆರಿಗೆ ವಿಧಿಸಲಾಗುತ್ತದೆಯೋ ಅಷ್ಟನ್ನು ಪಾವತಿಸಬೇಕಾಗುತ್ತದೆ. ನ.1ರಿಂದಲೇ ಸುಂಕ ವಿನಾಯಿತಿಯನ್ನು ಹಿಂಪಡೆದು, ಟ್ರಂಪ್‌ ಅವರು ಅಧ್ಯಾದೇಶವೊಂದನ್ನು ಹೊರಡಿಸಿದ್ದಾರೆ.

ವಿವಿಧ ದೇಶಗಳಿಗೆ ಸೇರಿದ 90 ವಸ್ತುಗಳಿಗೆ ಸಂಬಂಧಿಸಿದ ಉತ್ಪನ್ನಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಟ್ರಂಪ್‌ ಹಿಂಪಡೆದಿದ್ದು, ಅದರಲ್ಲಿ ಭಾರತದ್ದೇ 50 ಪದಾರ್ಥಗಳು ಇವೆ ಎಂಬುದು ಗಮನಾರ್ಹ. ಈ ರೀತಿ ತೆರಿಗೆ ವಿನಾಯಿತಿ ನೀಡಲು ಅಮೆರಿಕ ಸಾಮಾನ್ಯ ಆದ್ಯತಾ ವ್ಯವಸ್ಥೆಯನ್ನು ಹೊಂದಿದೆ. ಅದರ ಹೆಚ್ಚಿನ ಫಲಾನುಭವಿ ಈವರೆಗೆ ಭಾರತವೇ ಆಗಿತ್ತು. ಅಮೆರಿಕದ ಹೊಸ ನಿರ್ಧಾರದಿಂದಾಗಿ ಭಾರತವೇ ಹೆಚ್ಚು ಹೊಡೆತ ತಿನ್ನುವಂತಾಗಿದೆ.

ತೆರಿಗೆ ಹೇರಲ್ಪಟ್ಟ ಭಾರತದ ಉತ್ಪನ್ನಗಳು:

ಅಡಕೆ (ಹಸಿ ಅಥವಾ ಒಣಗಿದ, ಸಿಪ್ಪೆ ಬಿಡಿಸದ), ತೊಗರಿ ಬೇಳೆ, ವಿನೆಗರ್‌ ಅಥವಾ ಅಸೆಟಿಕ್‌ ಆ್ಯಸಿಡ್‌ನಿಂದ ಸಂರಕ್ಷಿಸಿದ ಮಾವು, ಮರಳು ಗಲ್ಲು, ಟಿನ್‌ ಕ್ಲೋರೈಡ್‌, ಬೇರಿಯಂ ಕ್ಲೋರೈಡ್‌, ಉಪ್ಪು, ಎಮ್ಮೆ ಚರ್ಮ ಮತ್ತಿತರ ವಸ್ತುಗಳು.

click me!