ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಭೇಟಿ ಮಾಡಿದ ಮೋದಿ

By Suvarna Web DeskFirst Published Jun 27, 2017, 9:12 AM IST
Highlights

ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಹಿಂದಿಯಲ್ಲೇ  ಭಾಷಣ ಮಾಡಿ ಗಮನ ಸೆಳೆದ ಪ್ರಧಾನಿ ಮೋದಿ, ಭಯೋತ್ಪಾದನೆ ಮಟ್ಟ ಹಾಕುವುದು ಉಭಯ ರಾಷ್ಟ್ರಗಳ ಮುಂದಿರುವ ಗುರಿ ಎಂದು ಪಾಕ್​ಗೆ ಪರೋಕ್ಷ ಎಚ್ಚರಿಕೆ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸುವಂತೆ ಟ್ರಂಪ್​ ಆಹ್ವಾನ ನೀಡಿದರು

ನವದೆಹಲಿ(ಜೂ.27): ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಹಿಂದಿಯಲ್ಲೇ  ಭಾಷಣ ಮಾಡಿ ಗಮನ ಸೆಳೆದ ಪ್ರಧಾನಿ ಮೋದಿ, ಭಯೋತ್ಪಾದನೆ ಮಟ್ಟ ಹಾಕುವುದು ಉಭಯ ರಾಷ್ಟ್ರಗಳ ಮುಂದಿರುವ ಗುರಿ ಎಂದು ಪಾಕ್​ಗೆ ಪರೋಕ್ಷ ಎಚ್ಚರಿಕೆ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸುವಂತೆ ಟ್ರಂಪ್​ ಆಹ್ವಾನ ನೀಡಿದರು

ಡೊನಾಲ್ಡ್  ಟ್ರಂಪ್  ಅಮೆರಿಕ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಿದ್ದರು. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 1.10ಕ್ಕೆ ಸರಿಯಾಗಿ ಶ್ವೇತಭವನ ಪ್ರವೇಶಿಸಿದ ಪ್ರಧಾನಿ ಮೋದಿಯವರನ್ನು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ದಂಪತಿ  ಆತ್ಮೀಯವಾಗಿ ಸ್ವಾಗತಿಸಿದರು. ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಬಳಿಕ ಅಧ್ಯಕ್ಷ ಟ್ರಂಪ್​ ಮೋದಿಯನ್ನು  ಶ್ವೇತಭವನಕ್ಕೆ ಕರೆದೊಯ್ದರು.

ಶ್ವೇತ ಭವನ ಪ್ರವೇಶಿಸಿದ ಪ್ರಧಾನಿ ಮೋದಿ  ಹಿಂದಿಯಲ್ಲಿ  ಮಾತನಾಡಿದರು.  ಡೊನಾಲ್ಡ್​  ಟ್ರಂಪ್  ಭೇಟಿ  ನನಗೆ ಸಂತಸ ತಂದಿದೆ ಎಂದ ಪ್ರಧಾನಿ ಮೋದಿ, ನನಗೆ ನೀಡಿದ ಸ್ವಾಗತ ಭಾರತ ದೇಶದ ಜನತೆಗೆ ನೀಡಿದ ಸ್ವಾಗತ ಎಂದು ಬಣ್ಣಿಸಿದರು.

ಇನ್ನು ಈ ವೇಳೆ ಇಂಗ್ಲಿಷ್'​ನಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಪ್ರಧಾನಿ ಮೋದಿಯನ್ನು  ಭೇಟಿಯಾಗಿರೋದು ಸಂತಸ ತಂದಿದೆ ಎಂದು ಧನ್ಯವಾದ ಅರ್ಪಿಸಿದರು.

ಬಳಿಕ ಉಭಯ ದೇಶಗಳ ನಿಯೋಗ ಮಟ್ಟದ ಮಾತುಕತೆ ನಡೆಯಿತು. ಹಿರಿಯ ಅಧಿಕಾರಿಗಳು , ರಾಷ್ಟ್ರೀಯ ಭದ್ರತಾ ಸಲಹೆಗಾರರ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ  ಡೋನಾಲ್ಡ್​ ಟ್ರಂಪ್ ಚರ್ಚೆ ನಡೆಸಿದರು.​ ಸುಮಾರು 1 ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ  ಪ್ರಮುಖ ಅಜೆಂಡವಾಗಿ ಭಯೋತ್ಪಾದನೆ, ರಕ್ಷಣೆ, ವ್ಯಾಪಾರದ ಬಗ್ಗೆ  ಸಮಾಲೋಚನೆ ನಡೆಯಿತು.

ಬಳಿಕ ವೈಟ್​ ಹೌಸ್​ನ ರೋಸ್​ಗಾರ್ಡನ್​ನಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್ ಅಮೆರಿಕಾದ ನಿಜವಾದ ಸ್ನೇಹಿತ ರಾಷ್ಟ್ರ ಭಾರತ. ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಜಿಎಸ್​ಟಿ, ಉದ್ಯೋಗ ಸೃಷ್ಟಿ ಮತ್ತು ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಸಹಕಾರ ಇರಲಿದೆ ಎಂದರು.

ಇನ್ನು ಇಲ್ಲಿಯೂ ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆ ವಿರುದ್ಧ ಉಭಯ ರಾಷ್ಟ್ರಗಳು ಹೋರಾಟ ನಡೆಸಲಿದೆ ಎಂದರು. ಉದ್ಯೋಗ ಹೆಚ್ಚಳ, ತಂತ್ರಜ್ಞಾನ ಅಭಿವೃದ್ಧಿ,  ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಒಟ್ಟಿಗೆ ಮುನ್ನಡೆಯೋದಾಗಿ ತಿಳಿಸಿದರು. ಇನ್ನು ಅಫ್ಘಾನಿಸ್ತಾನ ಪುನರ್​ ನಿರ್ಮಾಣಕ್ಕಾಗಿ ಅಮೆರಿಕ ಮತ್ತು ಭಾರತ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು. ಕೊನೆಯಲ್ಲಿ ಶೀಘ್ರವೇ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬರುವ ವಿಶ್ವಾಸವನ್ನು  ಪ್ರಧಾನಿ ಮೋದಿ ವ್ಯಕ್ತಪಡಿಸಿದರು.  

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯ್ತು. ಈ ಮೂಲಕ ವಿಶ್ವಕ್ಕೆ ಮಾರಕವಾಗಿರುವ ಭಯೋತ್ಪಾದನೆ ನಮ್ಮ ಮುಂದಿರುವ ದೊಡ್ಡ ಸವಾಲು. ಮತ್ತು ಅದನ್ನು  ಮೆಟ್ಟಿ ಮುನ್ನಡೆಯುವ ಸಂದೇಶವನ್ನು ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ ನೀಡಿದರು.

click me!