
ಅಗರ್ತಲ (ಜ.31): ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ, ಕೆಳಗಿಳಿಯುತ್ತಿದ್ದಂತೆ ಕೆಲ ರಾಜಕಾರಣಿಗಳ ಆಸ್ತಿ ರಾಕೆಟ್'ನಂತೆ ಏರಿಕೆಯಾಗುವ ಸಾಕಷ್ಟು ಉದಾಹರಣೆಗಳನ್ನು ಈ ದೇಶ ಕಂಡಿದೆ. ಆದರೆ ತ್ರಿಪುರದಲ್ಲಿ 20 ವರ್ಷಗಳಿಂದ ನಿರಂತರವಾಗಿ ಮುಖ್ಯಮಂತ್ರಿಯಾಗಿರುವ ಮಾಣಿಕ್ ಸರ್ಕಾರ್ ಇದಕ್ಕೆ ಅಪವಾದ. ಅವರು ಹೊಂದಿರುವ ಒಟ್ಟಾರೆ ಆಸ್ತಿಯೇ ಕೇವಲ 4000 ರು.! ಅವರ ಬಳಿ ಒಂದು ಮೊಬೈಲ್ ಫೋನ್ ಕೂಡ ಇಲ್ಲ!! ನಂಬಲು ಅಚ್ಚರಿಯಾದರೂ ಇದು ನಿಜ.
ಮಾಣಿಕ್ ಸರ್ಕಾರ್ ಅವರಿಗೆ ‘ದೇಶದಲ್ಲೇ ಅತ್ಯಂತ ಬಡ ಸಿಎಂ’ ಎಂಬ ಅಭಿದಾನ ಸಿಕ್ಕಿ ಸಾಕಷ್ಟು ವರ್ಷಗಳೇ ಉರುಳಿವೆ. ಅವರ ಬಡತನ ಈ ಬಾರಿ ಮತ್ತಷ್ಟು ಹೆಚ್ಚಾಗಿದೆ. ತ್ರಿಪುರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಧಾನ್‌ಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಮಾಣಿಕ್ ಸರ್ಕಾರ್, ಅದರ ಜತೆಗೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ. ಕೈಯಲ್ಲಿ 1520 ರೂ. ನಗದು ಇದೆ. ಬ್ಯಾಂಕ್ ಖಾತೆಯಲ್ಲಿ ಜ.20 ಕ್ಕೆ ಅನ್ವಯವಾಗುವಂತೆ 2410.16 ರು. ಇದೆ. ಅಗರ್ತಲದಲ್ಲಿ ಸೋದರರೊಂದಿಗೆ ಜಂಟಿ ಒಡೆತನ ಹೊಂದಿರುವ 0,0, 118 ಎಕರೆ ಪಿತ್ರಾರ್ಜಿತ ಆಸ್ತಿ ಇದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಚುನಾವಣೆ ವೇಳೆ ಅವರ ಖಾತೆಯಲ್ಲಿ 9720.38 ರೂ ಇತ್ತು.
ಏಕೆ ಹೀಗೆ?
ಸಿಎಂ ಸರ್ಕಾರ್‌ಗೆ ಸರ್ಕಾರದಿಂದ ವೇತನ ಸಿಗುತ್ತದೆ. ಆದರೆ ಸಿಪಿಎಂನ ಸಂಪ್ರದಾಯದಂತೆ ಅವರು ಅದನ್ನು ಪಕ್ಷಕ್ಕೆ ದೇಣಿಗೆ ಕೊಡುತ್ತಾರೆ. ಪ್ರತಿಯಾಗಿ ಜೀವನ ನಿರ್ವಹಣೆಗೆಂದು ಸಿಪಿಎಂ ಪಕ್ಷ ಸರ್ಕಾರ್ ಅವರಿಗೆ ಮಾಸಿಕ 10 ಸಾವಿರ ರೂ. ನೀಡುತ್ತದೆ. ಅದರಲ್ಲೇ ಅವರು ಸರಳ ಜೀವನ ಮಾಡುತ್ತಾರೆ. ಮಾಣಿಕ್‌ರ ಪತ್ನಿ ನಿವೃತ್ತ ಸರ್ಕಾರಿ ನೌಕರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.