
ಭಾರತ ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ಅತಿದೊಡ್ಡ ಮಾರುಕಟ್ಟೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿನ ಕೋಟ್ಯಾಂತರ ಮಂದಿ ಫೇಸ್'ಬುಕ್, ವಾಟ್ಸ್'ಆ್ಯಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಈ ಮಾದ್ಯಮವನ್ನು ಬಳಸಿಕೊಂಡು ಸಾಕಷ್ಟು ಅನುಕೂಲಕರ ಮಾಹಿತಿಯ ಜೊತೆಗೆ ಸುಳ್ಳು ಸುದ್ದಿಗಳನ್ನೂ ಹರಡಿಸಲಾಗುತ್ತಿದೆ. ಪ್ರಸಕ್ತ ವರ್ಷ ನೀವು ನಂಬುವಂತೆ ಮಾಡಿದ ಈ ಸುಳ್ಳು-ಸುದ್ದಿಗಳಿವು.
1. ಯುನೆಸ್ಕೋದಿಂದ ನರೇಂದ್ರ ಮೋದಿಯವರನ್ನು ಅತ್ಯುತ್ತಮ ಪ್ರಧಾನಿ ಎಂದು ಘೋಷಣೆ
ಜೂನ್ 2016ರ ವೇಳೆಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೂನೆಸ್ಕೋ ಸಂಸ್ಥೆಯು ಜಗತ್ತಿನ ಅತ್ಯತ್ತಮ ಪ್ರಧಾನಿ ಎಂದು ಘೋಷಿಸಲಾಯಿತು ಎಂದು ವಾಟ್ಸ್'ಆ್ಯಪ್ ಗುಂಪುಗಳು ಸೇರಿದಂತೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಸದ್ದು ಮಾಡಿತ್ತು. ಆದರೆ ಈ ಸುದ್ದಿ ಸುಳ್ಳು ಎಂದು ಯೂನೆಸ್ಕೋ ಸ್ಪಷ್ಟಪಡಿಸಿದೆ. ಆದರೆ ಈ ಗಾಳಿಸುದ್ದಿ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇದೆ.
2. ಯುನೆಸ್ಕೋದಿಂದ 'ಜನ-ಗಣ-ಮನ' ಅತ್ಯತ್ತಮ ರಾಷ್ಟ್ರಗೀತೆ ಎಂದು ಘೋಷಣೆ:
ಈ ಸುಳ್ಳು ಸುದ್ದಿಯಂತೂ 2008ರಿಂದಲೂ ಹರಿದಾಡುತ್ತಲೇ ಇದೆ. ರವೀಂದ್ರನಾಥ್ ಠ್ಯಾಗೋರ್ ರಚಿಸಿದ ಜನ-ಗಣ-ಮನವು ವಿಶ್ವದ ಅತ್ಯುತ್ತಮ ರಾಷ್ಟ್ರಗೀತೆ ಎಂದು ಯುನೆಸ್ಕೋ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಓದುವ ಜನರು ಈಗಲೂ ಇದನ್ನು ನಂಬಿದ್ದಾರೆ. 2016ರ ಸ್ವಾತಂತ್ರ್ಯ ದಿನಾಚರಣೆಯ ದಿನವಂತೂ ಈ ಗಾಳಿಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುನೆಸ್ಕೋ ಅಧಿಕಾರಿಗಳು, 'ಭಾರತದಲ್ಲಿ ಹರಿದಾಡುತ್ತಿರುವ ಈ ಗಾಳಿಸುದ್ದಿಯನ್ನು ನಾವೂ ಗಮನಿಸಿದ್ದೇವೆ. ಆದರೆ ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಭಾರತ ಮಾತ್ರವಲ್ಲ ಯಾವ ದೇಶದ ರಾಷ್ಟ್ರಗೀತೆಯನ್ನೂ ಅತ್ಯತ್ತಮ ರಾಷ್ಟ್ರಗೀತೆ ಎಂದು ಘೋಷಿಸಿಲ್ಲ ಎಂದಿದ್ದಾರೆ.
3.ಎರಡು ಸಾವಿರ ರೂಪಾಯಿ ನೋಟಿನಲ್ಲಿ ಜಿಪಿಎಸ್ ಚಿಪ್ ಇದೆ:
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8, 2016ರಂದು ಹಳೆಯ 500, 1000 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಿದ ನಂತರ ಹೊಸ ಎರಡು ಸಾವಿರ ರೂಪಾಯಿ ನೋಟು ಪರಿಚಯಿಸಿದ್ದು ನಮಗೆಲ್ಲ ಗೊತ್ತೇ ಇದೆ. ಆದ್ರೆ ಈ ಹೊಸ ನೋಟಿನಲ್ಲಿ ಜಿಪಿಎಸ್ ಚಿಪ್'ನ ವ್ಯವಸ್ಥೆಯಿದ್ದು, ಇದನ್ನು ಕಪ್ಪುಹಣವಾಗಿ ಎಲ್ಲೇ ಹುದುಗಿಸಿಟ್ಟರೂ ಪತ್ತೆ ಹಚ್ಚಬಹುದು ಎನ್ನುವ ಸುದ್ದಿಯಂತೂ ಈ ವರ್ಷದಲ್ಲಿ ಸಾಕಷ್ಟು ಸದ್ದು ಮಾಡಿಬಿಟ್ಟಿತು. ಆದರೆ ಆರ್'ಬಿಐ ಹೊಸ ನೋಟಿನಲ್ಲಿ ಯಾವುದೇ ಚಿಪ್ ಅಳವಡಿಸಿಲ್ಲ ಎನ್ನುವ ಮೂಲಕ ಈ ಗಾಳಿ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿಹಾಕಿತು.
4. ವಾಟ್ಸ್'ಆ್ಯಪ್ ಪ್ರೋಫೈಲ್ ಚಿತ್ರಗಳನ್ನು ಐಸಿಸ್ ಉಗ್ರರು ಬಳಸಿಕೊಳ್ಳುತ್ತಾರೆ:
ಈ ಮೆಸೇಜನ್ನು ಖಂಡಿತ ನೀವೊಮ್ಮೆಯಾದರೂ ಓದಿರುತ್ತೀರ. 'ಇದು ದೆಹಲಿ ಪೊಲೀಸರ ಪ್ರಕಟಣೆ. ಸುರಕ್ಷತಾ ಉದ್ದೇಶದಿಂದ ನಿಮ್ಮ ವಾಟ್ಸ್'ಆ್ಯಪ್ ಪ್ರೋಫೈಲ್ ಚಿತ್ರವನ್ನು ಈಗಲೇ ಬದಲಿಸಿಬಿಡಿ. ಇಲ್ಲದಿದ್ದರೇ ಐಸಿಸ್ ಉಗ್ರರು ನಿಮ್ಮ ದಾಖಲೆಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ವಾಟ್ಸ್'ಆ್ಯಪ್ ಸಿಇಓ ತಮ್ಮ ಬಳಕೆದಾರರಿಗೆ 20-25 ದಿನಗಳ ಮಟ್ಟಿಗೆ ವಾಟ್ಸ್'ಆ್ಯಪ್ ಚಿತ್ರ ಬದಲಿಸುವಂತೆ ಕೇಳಿಕೊಂಡಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಂತಿಮವಾಗಿ ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ಎ.ಕೆ. ಮಿಥಲ್ ಎಂದಿತ್ತು. ಆದರೆ ವಾಸ್ತವ ಏನಪ್ಪ ಅಂದ್ರೆ ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ಎ.ಕೆ. ವರ್ಮಾ.
5. ಹತ್ತು ರೂಪಾಯಿ ಕಾಯಿನ್ ಕೂಡಾ ಅಮಾನ್ಯ:
500 ಹಾಗೂ 1000 ರೂಪಾಯಿ ಅಮಾನ್ಯ ಮಾಡುವ ಮೊದಲು 10 ರೂಪಾಯಿ ಕಾಯಿನ್ ಅಮಾನ್ಯ ಮಾಡಿ ಆರ್'ಬಿಐ ಆದೇಶ ಹೊರಡಿಸಿದೆ ಎಂದು ಗಾಳಿ ಸುದ್ದಿ ಹರಡಿಸಲಾಗಿತ್ತು. ಸೆಪ್ಟಂಬರ್'ನಲ್ಲಿ ದೆಹಲಿ, ಆಗ್ರ, ಮೀರತ್ ಸುತ್ತ-ಮುತ್ತ ಈ ಆದೇಶ ಹೊರಡಿಸಲಾಗಿತ್ತು. ಈ ಸುದ್ದಿ ಅಂಗಡಿ ವರ್ತಕರಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.