ಕಾವೇರಿ ಕರ್ಫೂ: ನಾಳೆ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ, ಸರ್ಕಾರಿ ಶಾಲೆಗಳಿಗಿಲ್ಲ ರಜೆ ಭಾಗ್ಯ

By Internet DeskFirst Published Sep 13, 2016, 11:04 AM IST
Highlights

ಬೆಂಗಳೂರು (ಸೆ.13): ಕಾವೇರಿ ಗಲಾಟೆ ತೀವ್ರತೆ ಇರುವ ಮಂಡ್ಯ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಮಾತ್ರ ರಜೆ ನೀಡಲಾಗಿದೆ. ಇನ್ನುಳಿದಂತೆ ರಾಜ್ಯದ ಎಲ್ಲ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಮಂಡ್ಯ ಜಿಲ್ಲೆಯ ನಂತರ ಹೋರಾಟದ ತೀವ್ರತೆ ಇರುವ ರಾಜಧಾನಿ ಬೆಂಗಳೂರಿನಲ್ಲಿಯೂ ಎಂದಿನಂತೆ ಸರ್ಕಾರಿ ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸಲಿವೆ. ಕರ್ಫ್ಯೂ ಹೇರಿರುವ ೧೬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಜೆ ಘೋಷಿಸಲು ನಿರ್ಧರಿಸಲಾಗಿತ್ತು. ಮಂಗಳವಾರ ಸಂಜೆ ವಾತಾವರಣ ಸಹಜ ಸ್ಥಿತಿಗೆ ಬಂದ ಹಿನ್ನೆಲೆಯಲ್ಲಿ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ತಿಳಿಸಿದ್ದಾರೆ.
ಮಂಗಳವಾರ ಶಾಂತಿಯುತ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದೆ. ಹೀಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಾಲಾ ಕಾಲೇಜುಗಳು ಕಾರ್ಯ ನಿರ್ವಹಿಸಲಿವೆ. ಅಲ್ಲದೆ, ಈಗಾಗಲೇ ಕಳೆದ ಐದು ದಿನಗಳಿಂದ ಸರ್ಕಾರಿ ರಜೆ ಮತ್ತು ಬಂದ್ ಹಿನ್ನೆಲೆಯಲ್ಲಿ ರಜೆ ನೀಡಲಾಗಿತ್ತು. ಆದ್ದರಿಂದ ಬುಧವಾರ ರಜೆ ನೀಡು ಸಾಧ್ಯತೆಗಳು ಕಡಿಮೆ.
ಕ್ಯಾಮ್ಸ್ ವ್ಯಾಪ್ತಿ ಶಾಲೆಗಳಿಗೆ ರಜೆ:
ಸೋಮವಾರದ ದಿಢೀರ್ ಬೆಳವಣಿಗೆಯಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಮನೆಗೆ ತಲುಪಿಸಲು ಸಾಕಷ್ಟು ತೊಂದರೆ ಪಡಬೇಕಾಯಿತು. ಮುಂಜಾಗ್ರತಾ ಕ್ರಮಗಳಿಲ್ಲದೆ ಆತಂಕದ ವಾತಾವರಣ ಎದುರಿಸಬೇಕಾಯಿತು. ಹೀಗಾಗಿ ಮಕ್ಕಳ ರಕ್ಷಣಾ ದೃಷ್ಟಿಯಿಂದ ಸುರಕ್ಷಣೆ ಮತ್ತು ಭದ್ರತೆ ಕಾಪಾಡುವುದಕ್ಕಾಗಿ ಕರ್ಫ್ಯೂ ಹೇರಿರುವ ಬಡಾವಣೆಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಕ್ಯಾಮ್ಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ.

click me!