ಉತ್ತರ ಕರ್ನಾಟಕ ಬಂದ್ : ಕೆಲವು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ

Published : Dec 26, 2017, 10:24 PM ISTUpdated : Apr 11, 2018, 12:39 PM IST
ಉತ್ತರ ಕರ್ನಾಟಕ ಬಂದ್ : ಕೆಲವು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ

ಸಾರಾಂಶ

ಸಾರ್ವಜನಿಕರ ತುರ್ತು ಅಗತ್ಯಗಳಾದ ಹಾಲು, ಆಸ್ಪತ್ರೆ, ಮೆಡಿಕಲ್ ಶಾಪ್‌ಗಳ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ. ಆದರೆ, ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸೇವೆಗಳು ಒಂದು ದಿನ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಹುಬ್ಬಳ್ಳಿ(ಡಿ.26): ಮಹದಾಯಿ, ಕಳಸಾ- ಬಂಡೂರಿ ಯೋಜನೆ ಜಾರಿ ವಿಷಯವಾಗಿ ರಾಜಕೀಯ ಪಕ್ಷಗಳು ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಆರೋಪಿಸಿ ಕಳಸಾ-ಬಂಡೂರಿ ಹೋರಾಟ ಸಮನ್ವಯ ಒಕ್ಕೂಟ ಬುಧವಾರ ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಮೂರು ಜಿಲ್ಲೆಗಳಾದ ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಬಂದ್ ತೀವ್ರ ಆಗುವ ಸಾಧ್ಯತೆ ಇದೆ.

ಮಹದಾಯಿ ಹೋರಾಟದ ಕೇಂದ್ರ ಬಿಂದು ನರಗುಂದ ಮತ್ತು ಗಜೇಂದ್ರಗಡದಲ್ಲಿ ಬಂದ್ ಸಂಪೂರ್ಣವಾಗುವ ಸಾಧ್ಯತೆ ಇದೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ತುರ್ತು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ಹೆಚ್ಚುವರಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಶಾಲೆ- ಕಾಲೇಜುಗಳಿಗೆ ರಜೆ

ಧಾರವಾಡ ಜಿಲ್ಲೆ, ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ ಹಾಗೂ ಬೈಲಹೊಂಗಲ ತಾಲೂಕುಗಳಲ್ಲಿ ಶಾಲಾ- ಕಾಲೇಜುಗಳಿಗೆ, ಗದಗ ಜಿಲ್ಲೆಯ ರೋಣ ಮತ್ತು ನರಗುಂದ ಪಟ್ಟಣಗಳ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಏನಿರುತ್ತೆ?

ಸಾರ್ವಜನಿಕರ ತುರ್ತು ಅಗತ್ಯಗಳಾದ ಹಾಲು, ಆಸ್ಪತ್ರೆ, ಮೆಡಿಕಲ್ ಶಾಪ್‌ಗಳ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ. ಆದರೆ, ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಸೇವೆಗಳು ಒಂದು ದಿನ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಯಾಕೆ ಈ ಬಂದ್?

ಮಹದಾಯಿ ನೀರನ್ನು ತರುವ ವಿಷಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ರೈತರೊಂದಿಗೆ ಚೆಲ್ಲಾಟವಾಡುತ್ತಿವೆ. ಬರೀ ಆಶ್ವಾಸನೆ ನೀಡುವುದೇ ಆಗಿದೆ ಎಂಬ ಆರೋಪ ಹೋರಾಟಗಾರರದ್ದು. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಡಿ.15ರೊಳಗೆ ಮಹದಾಯಿ ನೀರು ಕೊಡುವುದಾಗಿ ಭರವಸೆ ನೀಡಿದ್ದರು. ಬಳಿಕ ಹುಬ್ಬಳ್ಳಿ ಪರಿವರ್ತನಾ ರಾಲಿಯಲ್ಲಿ ಸಿಹಿಸುದ್ದಿ ನೀಡುವುದಾಗಿ ತಿಳಿಸಿದ್ದ ಅವರು ಗೋವಾ ಸಿಎಂ ತಮಗೆ ಬರೆದಿರುವ ಪತ್ರವನ್ನು ಮಾತ್ರ ವಾಚಿಸಿದ್ದರು. ಆದರೆ, ಇದು ಹೋರಾಟಗಾರರಲ್ಲಿ ತೃಪ್ತಿಯನ್ನು ತಂದುಕೊಡಲಿಲ್ಲ. ಹೀಗಾಗಿ ನರಗುಂದ ಸೇರಿದಂತೆ ವಿವಿಧೆಡೆಗಳಿಂದ ಸುಮಾರು 500 ರೈತರು ಬೆಂಗಳೂರಲ್ಲಿ ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ನರಗುಂದದಲ್ಲಿ ನಡೆಯುತ್ತಿರುವ ಹೋರಾಟ ೮೯೫ನೇ ದಿನಕ್ಕೆ ಕಾಲಿಟ್ಟರೆ, ನವಲಗುಂದದಲ್ಲಿ ನಡೆಯುತ್ತಿರುವ ಹೋರಾಟ 887 ದಿನಕ್ಕೆ ಕಾಲಿಟ್ಟಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಬಿಗಿ ಭದ್ರತೆ

ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ 2 ಸಾವಿರ ಪೊಲೀಸ್ ಕಾನ್‌ಸ್ಟೇಬಲ್‌ಗಳು, 6 ಕೆಎಸ್‌ಆರ್‌ಪಿ ತುಕಡಿ, ಇಬ್ಬರು ಡಿಸಿಪಿ, ಐವರು ಎಸಿಪಿ, 30 ಇನ್‌ಸ್ಪೆಕ್ಟರ್‌ಗಳು ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಬಾರಿ ಬಂದ್ ಸಂದರ್ಭದಲ್ಲಿ ನವಲಗುಂದದಲ್ಲಿನ ಸರ್ಕಾರಿ ಕಚೇರಿಗಳ ಬೀಗ ಒಡೆದು ದಾಖಲಾತಿಗಳನ್ನು ಹಾಳು ಮಾಡಿರುವುದಿಂದ ಈ ಬಾರಿ ಸರ್ಕಾರಿ ಕಚೇರಿಗಳಿಗೆ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರವನ್ನು ಮುಂಜಾಗ್ರತವಾಗಿ ರದ್ದು ಮಾಡಲಾಗಿದೆ. ಮದ್ಯದ ಅಂಗಡಿಗಳನ್ನು ಸಹ ಬೆಳಗ್ಗೆ ೬ರಿಂದ ಸಂಜೆ ೬ರ ವರೆಗೆ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದರೆ ರೌಡಿ ಶೀಟರ್‌ಗಳ ಪಟ್ಟಿಯಲ್ಲಿರುವವರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾನೂನು ಪರೀಕ್ಷೆ ಮುಂದಕ್ಕೆ

ಡಿಸೆಂಬರ್ 27ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯಕಾನೂನು ವಿಶ್ವವಿದ್ಯಾಲಯ ಉತ್ತರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮುಂದೂಡಿವೆ. 27ರಂದು ನಡೆಯಬೇಕಿದ್ದ ಕವಿವಿ ಸ್ನಾತಕೋತ್ತರ 3ನೇ ಸೆಮಿಸ್ಟರ್ ಒಇಸಿ ಪರೀಕ್ಷೆಗಳನ್ನು 2018ರ ಜ.7ರಂದು ಹಾಗೂ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಡಿ.31ರ ಭಾನುವಾರಕ್ಕೆ ಮುಂದೂಡಲಾಗಿದೆ. ಧಾರವಾಡ ಜಿಲ್ಲಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ 27ರಂದು ರಜೆ ಘೋಷಿಸಲಾಗಿದೆ.

--

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್