ಬಾಂಗ್ಲಾ ಪ್ರಧಾನಿಗೂ ತಟ್ತು ಈರುಳ್ಳಿ ಬಿಸಿ: ಅಡುಗೆಗೆ ಈರುಳ್ಳಿ ಬಳಸದಂತೆ ಸೂಚನೆ| ಭಾರತ-ಬಾಂಗ್ಲಾದೇಶ ವ್ಯಾಪಾರ ವೇದಿಕೆ ಸಭೆಯಲ್ಲಿ ಮಾತನಾಡಿದ ಹಸೀನಾ
ನವದೆಹಲಿ[ಸೆ.05]: ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಇತ್ತೀಚೆಗೆ ವಿದೇಶಗಳಿಗೆ ಈರುಳ್ಳಿ ರಫ್ತಿಗೆ ಹೇರಿದ ನಿಷೇಧ, ನೆರೆಯ ಬಾಂಗ್ಲಾ ದೇಶದ ಪ್ರಧಾನಿ ಮನೆಗೇ ಮುಟ್ಟಿದೆ. ತಮ್ಮ ಮನೆ ಅಡುಗೆಯವನಿಗೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು, ‘ಊಟ-ತಿಂಡಿಗೆ ಈರುಳ್ಳಿ ಹಾಕಬೇಡ’ ಎಂದು ಸೂಚಿಸಿದ್ದಾರೆ!
ಭಾರತ-ಬಾಂಗ್ಲಾದೇಶ ವ್ಯಾಪಾರ ವೇದಿಕೆ ಸಭೆಯಲ್ಲಿ ಮಾತನಾಡಿದ ಹಸೀನಾ, ‘ಏಕಾಏಕಿ ಭಾರತ ಈರುಳ್ಳಿ ರಫ್ತು ನಿಲ್ಲಿಸಿತು. ಇದರಿಂದ ಬಾಂಗ್ಲಾದೇಶದ ಜನರಿಗೆ ಈರುಳ್ಳಿ ಸಿಗದೇ ತುಂಬಾ ಕಷ್ಟವಾಗಿದೆ. ಈ ಮಾಹಿತಿ ದೊರಕಿದ ಕೂಡಲೇ ನನ್ನ ಮನೆಯ ಬಾಣಸಿಗನಿಗೆ ‘ಈರುಳ್ಳಿ ಬಳಸುವುದನ್ನು ನಿಲ್ಲಿಸು’ ಎಂದು ಸೂಚಿಸಿದೆ’ ಎಂದು ಲಘು ಧಾಟಿಯಲ್ಲಿ ಹೇಳಿದರು.
‘ಹೀಗೆ ಏಕ್‌ದಂ ಈರುಳ್ಳಿ ರಫ್ತು ನಿಲ್ಲಿಸುವುದು ಸರಿಯಲ್ಲ. ಇಂಥ ನಿರ್ಧಾರಗಳ ಬಗ್ಗೆ ಮೊದಲೇ ಮಾಹಿತಿ ನೀಡಿ ನಂತರ ಕ್ರಮ ಜರುಗಿಸಬೇಕು’ ಎಂದು ಭಾರತ ಸರ್ಕಾರವನ್ನು ಹಸೀನಾ ಕೋರಿದರು.