
ಬೆಂಗಳೂರು(ನ.07): ಸರ್ಕಾರ ಹಠ ಹಿಡಿದು ಟಿಪ್ಪು ಜಯಂತಿ ಮಾಡುವುದಕ್ಕೆ ಹೊರಟಿದೆ. ನಿಷೇದಾಜ್ಞೆ ನಡುವೆಯೇ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪೊಲೀಸ್ ಭದ್ರಕೋಟೆಯಲ್ಲಿ ಇಂಥಾ ಜಯಂತಿ ಮಾಡೋ ಅಗತ್ಯ, ಅನಿವಾರ್ಯತೆ ಇದೆಯಾ ಎನ್ನುವ ಪ್ರಶ್ನೆಗೂ ಸರ್ಕಾರ ಕಿವಿಗೊಡುತ್ತಿಲ್ಲ. ಒಬ್ಬ ವಿವಾದಾತ್ಮಕ ರಾಜನಿಗೆ ಸದ್ಗುಣಗಳನ್ನೆಲ್ಲ ಕೊಟ್ಟು, ಜಯಂತಿ ಆಚರಿಸೋಕೆ ಹೊರಟಿರೋ ಸರ್ಕಾರಕ್ಕೆ, ಕರ್ನಾಟಕಕ್ಕೆ, ಕನ್ನಡಕ್ಕೆ ಟಿಪ್ಪುವಿಗಿಂತಲೂ ಅತ್ಯುನ್ನತ ಮಟ್ಟದ ಕೊಡುಗೆ ನೀಡಿರುವ ಸಾಧಕರ ಪರಂಪರೆ ಗೊತ್ತಿಲ್ಲವಾ? ಮುಸ್ಲಿಮರೇ ಬೇಕೆಂದರೆ, ಅಂತಹ ಮಹನೀಯರೂ ಇದ್ದಾರೆ. ಅವರ ಜಯಂತಿಯನ್ನ ಮಾಡಬಾರದೇಕೆ..? ಇದು ಜನರ ಪ್ರಶ್ನೆ.
ಸರ್ಕಾರವೇ ಯಾರದ್ದಾದರೂ ಒಬ್ಬ ವ್ಯಕ್ತಿಯ ಜಯಂತಿ ಆಚರಿಸುತ್ತದೆ ಎಂದರೆ ಅದು ಸಂಭ್ರಮವಾಗಬೇಕು. ಆತಂಕವಾಗಬಾರದು. ಆದರೆ, ಟಿಪ್ಪು ಜಯಂತಿ ಸಡಗರದ ಬದಲು, ಭಯವನ್ನೇ ಸೃಷ್ಟಿಸುತ್ತಿದೆ. ಸರ್ಕಾರ, ಕೇವಲ ಟಿಪ್ಪು ಜಯಂತಿ ಆಚರಿಸೋದಿಲ್ಲ. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ಜವಹರ ಲಾಲ್ ನೆಹರು, ಸರ್ದಾರ್ ವಲ್ಲಭಬಾಯ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್,ಕನಕದಾಸ, ಬಸವಣ್ಣ, ವಾಲ್ಮೀಕಿ, ವಿಶ್ವೇಶ್ವರಯ್ಯ, ಹೀಗೆ ಹಲವು ಮಹನೀಯರ ಜಯಂತಿಯ ಆಚರಣೆ ನಡೆಯುತ್ತೆ...ಇವಱರಿಗೂ ವಿವಾದವಾಗುವುದಿಲ್ಲ. ವಿವಾದವಾಗುತ್ತಿರುವುದು ಟಿಪ್ಪು ಜಯಂತಿ ಆಚರಣೆಗೆ ಮಾತ್ರ. ಒಬ್ಬ ವ್ಯಕ್ತಿಯ ಜಯಂತಿಯನ್ನು ಆಚರಣೆ ಮಾಡುತ್ತೇವೆ ಎಂದು ಸರ್ಕಾರ ಹೊರಡುವಾಗ ಹತ್ತಲ್ಲ, ನೂರು ಬಾರಿ ಪ್ರಶ್ನಿಸಿಕೊಳ್ಳಬೇಕು. ಆದರೆ, ಟಿಪ್ಪು ಜಯಂತಿ ವಿಚಾರದಲ್ಲಿ ಹಾಗಾಗಿಲ್ಲ. ಹಾಗೆ ನೋಡಿದರೆ, ಕರ್ನಾಟಕದಲ್ಲಿ ಟಿಪ್ಪುವಿಗಿಂತಲೂ ದೊಡ್ಡ ಸಾಧನೆ ಮಾಡಿರುವ, ಪ್ರಾತಃಸ್ಮರಣೀಯರ ಸಂಖ್ಯೆ ದೊಡ್ಡದಿದೆ. ಟಿಪ್ಪು ಸುಲ್ತಾನ್ ಎಂಬ ರಾಜನ ಜಯಂತಿಗೆ ಇಷ್ಟೆಲ್ಲ ಹಠ ಮಾಡುವ ಸರ್ಕಾರ, ಯಾವುದೇ ವಿವಾದಗಳಿಲ್ಲದ, ಅಪರೂಪದ ಸಾಧಕರನ್ನು ಮರೆತೇಬಿಟ್ಟಿದೆ. ಕರ್ನಾಟಕವನ್ನಾಳಿದ ರಾಜರುಗಳೇ ಆಗಬೇಕಾ..? ಇಲ್ಲಿದೆ ನೋಡಿ.
ನಾಲ್ವಡಿ ಕೃಷ್ಣರಾಜ ಒಡೆಯರ್:
ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಇಲ್ಲದಿದ್ದರೆ, ಇಂದು ಕನ್ನಡ ಭಾಷೆ, ಉದ್ಯಮ, ಕೈಗಾರಿಕೆ, ಕೃಷಿ ಕ್ಷೇತ್ರಗಳ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.
ಮಯೂರ ವರ್ಮ:
ಮಯೂರ ವರ್ಮ, ಕದಂಬ ರಾಜಮನೆತನದ ರಾಜ. ಕರ್ನಾಟಕದ ಮೊದಲ ಚಕ್ರವರ್ತಿ.
ಶ್ರೀ ಕೃಷ್ಣದೇವರಾಯ:
ಕರ್ನಾಟಕ ಮರೆತಿರುವ ಮತ್ತೊಬ್ಬ ಚಕ್ರವರ್ತಿ, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ. ಆಡಳಿತ ವ್ಯವಸ್ಥೆ ಹೇಗಿರಬೇಕು ಎಂಬುದಕ್ಕೆ ಮಾದರಿ ಹಾಕಿಕೊಟ್ಟ ದಕ್ಷ.
ವಿಕ್ರಮಾದಿತ್ಯ:
ಚಾಲುಕ್ಯರ ವಿಕ್ರಮಾದಿತ್ಯ ಜಯಂತಿಯನ್ನೂ ಸರ್ಕಾರವೇನೂ ಆಚರಿಸುವುದಿಲ್ಲ. ಈ ಚಕ್ರವರ್ತಿಯ ಸಾಧನೆಯನ್ನು ಬಾದಾಮಿ, ಪಟ್ಟದಕಲ್ಲು, ಐಹೊಳೆಯ ಶಿಲ್ಪಕಲೆಗಳೇ ಬಣ್ಣಿಸುತ್ತಿವೆ.
ಅಮೋಘವರ್ಷ ನೃಪತುಂಗ:
ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜ ಮಾರ್ಗ. ಈ ಕೃತಿಯ ಹಿಂದಿನ ಪ್ರೇರಕ ಶಕ್ತಿಯೇ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗ.
ವಿಷ್ಣುವರ್ಧನ:
ಇನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಕಾಲದಲ್ಲೂ ಕನ್ನಡವೇ ಆಡಳಿತ ಭಾಷೆಯಾಗಿತ್ತು. ಇವರ ಕೊಡುಗೆ ಬಣ್ಣಿಸಲು, ಬೇಲೂರು, ಹಳೇಬೀಡು, ಸೋಮನಾಥಪುರದ ಅದ್ಭುತ ಶಿಲ್ಪಕಲೆಗಳೇ ಸಾಕು.
ಇವರ ಜಯಂತಿಯನ್ನೂ ಸರ್ಕಾರ ಮಾಡುವುದಿಲ್ಲ. ಇವರ ಜಯಂತಿಯನ್ನು ಮಾಡಿದರೆ ವಿರೋಧವೂ ಇರುವುದಿಲ್ಲ. ಅಷ್ಟೆಲ್ಲ ಏಕೆ.. ಮುಸ್ಲಿಮರೇ ಬೇಕೆಂದರೆ, ಆ ಸಮುದಾಯದಲ್ಲೇನು ಕಡಿಮೆ ಮಹನೀಯರಿದ್ದಾರಾ..? ಆಗಿನ ಕಾಲದಲ್ಲೇ ಸಾಮರಸ್ಯ ಸಾರಿದವರು, ಶಾಂತಿ ಮಂತ್ರ ಬೋಧಿಸಿದವರು, ನೀರುಣಿಸಿದ ಮಹಾತ್ಮರ ಪಟ್ಟಿಯೇ ಇದೆ.
ಸಂತ ಶಿಶುನಾಳ ಷರೀಫ:
19ನೇ ಶತಮಾನದಲ್ಲೇ ತತ್ವಪದಗಳ ಮೂಲಕವೇ ಸಹಬಾಳ್ವೆಯ ಸಂದೇಶ ಸಾರಿದ್ದವರು ಷರೀಫಜ್ಜ.
ನಜೀರ್ ಸಾಬ್:
ಕರ್ನಾಟಕದ ಜನ ಕುಡಿಯುವ ನೀರಿಗೆ ತತ್ತರಿಸಿ ಹೋಗಿದ್ದಾಗ ನೀರು ಪೂರೈಸಿ ನೀರ್ಸಾಬ್ರು ಎಂದೇ ಖ್ಯಾತರಾದವರು.
ಎಸ್.ಕೆ. ಕರೀಂ ಖಾನ್:
ಜಾನಪದ ಸಾಹಿತ್ಯ ಕೃಷಿ ಕ್ಷೇತ್ರದ ಮೇರುಪರ್ವತ ಎಸ್.ಕೆ. ಕರೀಂ ಖಾನ್ ಕನ್ನಡಿಗರೇ. ಸಹಬಾಳ್ವೆಯ ಸಂದೇಶ ಸಾರಿದವರೇ.
ಮಿರ್ಜಾ ಇಸ್ಮಾಯಿಲ್:
ಇನ್ನೂ, ಮೈಸೂರು ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಕೊಡುಗೆ ಇಲ್ಲದಿದ್ದರೆ, ಕರ್ನಾಟಕದ ಈಗಿನ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿತ್ತೇ?
ಹೀಗೆ ಹತ್ತಾರು ಮಹನೀಯರನ್ನು ಕಣ್ಣೆದುರೇ ಇಟ್ಟುಕೊಂಡು ಸರ್ಕಾರ ವಿವಾದಿತ ವ್ಯಕ್ತಿಯ ಜಯಂತಿಗೆ ಹಠ ಬಿದ್ದಿರುವುದೇಕೆ? ಇಷ್ಟು ಹಠ ಮಾಡಿ, ಇಷ್ಟು ಭದ್ರತೆಯ ನಡುವೆ ಜಯಂತಿ ಮಾಡಿ ಸರ್ಕಾರ ಸಾಧಿಸುವುದಾದರೂ ಏನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.