ಟೈಮ್‌ 100 ಪ್ರಭಾವಿಗಳ ಪಟ್ಟಿಯಲ್ಲಿ ಮುಕೇಶ್

By Naveen KodaseFirst Published Apr 18, 2019, 11:59 AM IST
Highlights

2019ನೇ ಸಾಲಿನ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಸ್ಥಾನ ಪಡೆದಿದ್ದಾರೆ. ಅಂಬಾನಿ ಮಾತ್ರವಲ್ಲದೇ ಮತ್ತೆ ಕೆಲವು ಭಾರತೀಯರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ನ್ಯೂಯಾರ್ಕ್[ಏ.18]: ಟೈಮ್‌ ನಿಯತಕಾಲಿಕೆಯ 2019ನೇ ಸಾಲಿನ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿ ಬುಧವಾರ ಬಿಡುಗಡೆ ಆಗಿದ್ದು, ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ, ಭಾರತದಲ್ಲಿ ಎಲ್‌ಜಿಬಿಟಿ ಸಮುದಾಯದ ಪರ ಕಾನೂನು ಹೋರಾಟ ಕೈಗೊಂಡ ಅರುಂಧತಿ ಕಾಟ್ಜು ಮತ್ತು ಮನೇಕಾ ಗುರುಸ್ವಾಮಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತೀಯ ಮೂಲದ ಅಮೆರಿಕದ ಹಾಸ್ಯಗಾರ ಹಾಗೂ ಟೀವಿ ನಿರೂಪಕ ಹಸನ್‌ ಮಿನ್ಹಾಜ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪೋಪ್‌ ಫ್ರಾನ್ಸಿಸ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ಖಾತ ಗಾಲ್ಫ್ ಆಟಗಾರ ಟೈಗರ್‌ ವುಡ್ಸ್‌ ಮತ್ತು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅವರು ಪಟ್ಟಿಯಲ್ಲಿದ್ದಾರೆ.

ಮಹಿಂದ್ರಾ ಗ್ರೂಪ್‌ ಮುಖ್ಯಸ್ಥ ಆನಂದ್‌ ಮಹಿಂದ್ರಾ, ಅಂಬಾನಿ ಅವರ ಪರ ಟೈಮ್‌ ನಿಯತಕಾಲಿಕೆಯಲ್ಲಿ ವ್ಯಕ್ತಿಚಿತ್ರಣ ಬರೆದಿದಿದ್ದಾರೆ. ಮುಕೇಶ್‌ ಅಂಬಾನಿ ಅವರ ದೃಷ್ಟಿಕೋನ ತಂದೆ ಧೀರೂಬಾಯಿ ಅಂಬಾನಿ ಅವರಿಗಿಂತಲೂ ಮಹತ್ವಾಕಾಂಕ್ಷಿಯಾಗಿದೆ. ಜಿಯೋ ಮೊಬೈಲ್‌ ನೆಟ್‌ವರ್ಕ್ ಅತಿ ಕಡಿಮೆ ದರಕ್ಕೆ 4ಜಿ ಡೇಟಾ ನೀಡುತ್ತಿದ್ದು, 28 ಕೋಟಿ ಗ್ರಾಹಕರನ್ನು ಸಂಪಾದಿಸಿದೆ ಎಂದು ಬಣ್ಣಿಸಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಾದ ಕಾಟ್ಜು ಹಾಗೂ ಗುರುಸ್ವಾಮಿ ಅವರ ಪರ ನಟಿ ಪ್ರಿಯಾಂಕಾ ಚೋಪ್ರಾ ವ್ಯಕ್ತಿಚಿತ್ರಣ ಬರೆದಿದ್ದಾರೆ. ಕಾಟ್ಜು ಹಾಗೂ ಗುರುಸ್ವಾಮಿ ಅವರು ಭಾರತದಲ್ಲಿ ಸಲಿಂಗಕಾಮಿಗಳು ಹಾಗೂ ತೃತೀಯಲಿಂಗಳ ಸಮುದಾಯಕ್ಕೆ ಇತರ ಸಮುದಾಯದಂತೆ ಸಮಾನ ಸ್ಥಾನಮಾನ ನೀಡುವಂತೆ ಹೋರಾಡಿದ ಮುಂಚೂಣಿ ಮಹಿಳೆಯರೆನಿಸಿದ್ದಾರೆ. ಇವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರಿಣಾಮವಾಗಿ ಸುಪ್ರೀಂಕೋರ್ಟ್‌ ಸಲಿಂಗಕಾಮ ಅಪರಾಧ ಎಂದಿದ್ದ ಸಂವಿಧಾನದ 377ನೇ ಪರಿಚ್ಛೇದನ್ನು ರದ್ದುಗೊಳಿಸುವ ಐತಿಹಾಸಿಕ ತೀರ್ಪು ನೀಡಿದೆ ಎಂದು ಪ್ರಿಯಾಂಕಾ ತಮ್ಮ ಅಂಕಣದಲ್ಲಿ ಬಣ್ಣಿಸಿದ್ದಾರೆ.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!