ವಿಮಾನ ಕುಸಿಯುತ್ತಿದ್ದಾಗ ಎಲ್ಲಾ ಮುಗಿದೇ ಹೋಯ್ತು ಅನ್ನಿಸಿತು

First Published Apr 30, 2018, 7:22 AM IST
Highlights

ಹುಬ್ಬಳ್ಳಿಗೆ ತಾವು ಇತ್ತೀಚೆಗೆ ಆಗಮಿಸಿದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ವೇಳೆ ಇನ್ನೇನು ಎಲ್ಲಾ  ಮುಗಿದೇ ಹೋಯ್ತು ಎನ್ನಿಸಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ: ಹುಬ್ಬಳ್ಳಿಗೆ ತಾವು ಇತ್ತೀಚೆಗೆ ಆಗಮಿಸಿದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ವೇಳೆ ಇನ್ನೇನು ಎಲ್ಲಾ  ಮುಗಿದೇ ಹೋಯ್ತು ಎನ್ನಿಸಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಅಂದು ತಾವು ಜೀವ ಭಯ ಎದುರಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ದಿಲ್ಲಿಯಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ಜನಾಕ್ರೋಶ ರ‌್ಯಾಲಿ’ಯಲ್ಲಿ ಮಾತನಾಡಿದ ಅವರು, ‘2-3 ದಿನದ ಹಿಂದೆ ನಾನು ಕರ್ನಾಟಕದ ಹುಬ್ಬಳ್ಳಿಗೆ ವಿಮಾನದಲ್ಲಿ ಹೋಗುತ್ತಿದ್ದೆ.

ವಿಮಾನವು ಹಠಾತ್ತನೆ 8 ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿಯಿತು. ಆಗ ನನಗೆ ಎಲ್ಲಾ ಮುಗಿದೇ ಹೋಯ್ತು ಎನ್ನಿಸಿತ್ತು. ಆದರೆ, ಆ ಕ್ಷಣದಲ್ಲೇ ನಾನು ಮಾನಸ ಸರೋವರ ಯಾತ್ರೆಗೆ ಹೋಗಬೇಕು ಅಂದುಕೊಂಡೆ. ಹೀಗಾಗಿ ಕರ್ನಾಟಕ ಚುನಾವಣೆ ಬಳಿಕ 10-15 ದಿವಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವೆ. ಇದಕ್ಕೆ ಹೋಗಲು ನಿಮ್ಮ (ಕಾರ್ಯಕರ್ತರ) ಅನುಮತಿ ಬೇಡುವೆ’ ಎಂದೂ ರಾಹುಲ್ ಹೇಳಿದರು ಎಂದರು.
ಈ ಹಿಂದೆ ವಿದೇಶಕ್ಕೆ ಹೋಗುವಾಗ ರಾಹುಲ್ ಗಾಂಧಿ ಹೇಳದೇ ಕೇಳದೇ ತಿಂಗಳುಗಟ್ಟಲೆ ನಾಪತ್ತೆಯಾಗಿದ್ದು, ಸಾಕಷ್ಟು ವಾದಕ್ಕೀಡಾಗಿತ್ತು. ಕೈಲಾಸ ಮಾನಸ ಸರೋವರ ಶಿವನ ಸ್ಥಳವಾಗಿದ್ದು, ಇದು ಪ್ರಸ್ತುತ ಚೀನಾ ಹಿಡಿತದಲ್ಲಿರುವ ಟಿಬೆಟ್ ನಲ್ಲಿದೆ.
ಇತ್ತೀಚೆಗೆ ರಾಹುಲ್ ಇದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಬಗ್ಗೆ ಅವರ ಆಪ್ತ ಕೌಶಲ್ ವಿದ್ಯಾರ್ಥಿ ಅವರು ಕರ್ನಾಟಕ ಡಿಜಿಪಿಗೆ ದೂರು ನೀಡಿದ್ದರು. ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಆದರೆ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಗಳು ವಿಮಾನ ಯಾವುದೇ ತಾಂತ್ರಿಕ ದೋಷ ಹೊಂದಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದ್ದರು.

click me!