ನಿನ್ನೆ ನಾಡಿನಲ್ಲೆಲ್ಲ ಯುಗಾದಿ ಸಂಭ್ರಮವೋ ಸಂಭ್ರಮ. ಆದರೆ ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆ ಗ್ರಾಮದಲ್ಲಿ ಮಾತ್ರ ಹಬ್ಬದ ಸಡಗರವೇ ಇಲ್ಲ. ಮನೆ ಮುಂದೆ ರಂಗೋಲಿಯಿಲ್ಲ, ಬಾಗಿಲಿಗೆ ಹಸಿರು ತೋರಣವಿಲ್ಲ, ಹೊಸ ಬಟ್ಟೆ ಧರಿಸಿದವರ ಸುಳಿವೇ ಇಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ ಈ ಗ್ರಾಮಕ್ಕೆ ಯುಗಾದಿ ಹಬ್ಬವೇ ಇಲ್ಲ.
ಕೋಲಾರ(ಮಾ.30): ನಿನ್ನೆ ನಾಡಿನಲ್ಲೆಲ್ಲ ಯುಗಾದಿ ಸಂಭ್ರಮವೋ ಸಂಭ್ರಮ. ಆದರೆ ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆ ಗ್ರಾಮದಲ್ಲಿ ಮಾತ್ರ ಹಬ್ಬದ ಸಡಗರವೇ ಇಲ್ಲ. ಮನೆ ಮುಂದೆ ರಂಗೋಲಿಯಿಲ್ಲ, ಬಾಗಿಲಿಗೆ ಹಸಿರು ತೋರಣವಿಲ್ಲ, ಹೊಸ ಬಟ್ಟೆ ಧರಿಸಿದವರ ಸುಳಿವೇ ಇಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ ಈ ಗ್ರಾಮಕ್ಕೆ ಯುಗಾದಿ ಹಬ್ಬವೇ ಇಲ್ಲ.
ಕುರುಡುಮಲೆ ಗ್ರಾಮದಲ್ಲಿ ಪಾಂಡವರು ಏಕ ಶಿಲಾ ಬೃಹತ್ ಗಣಪತಿಯನ್ನು ಸ್ಥಾಪನೆ ಮಾಡಿದ್ದರು ಎನ್ನುವ ಪ್ರತೀತಿ ಇದೆ. ಈ ಸಿದ್ಧಿ ವಿನಾಯಕನ ಬಳಿ ಪ್ರಾರ್ಥಿಸಿದ್ದೆಲ್ಲ ಸಿದ್ಧಿಯಾಗುತ್ತಂತೆ. ಆದರೂ ಐತಿಹಾಸಿಕ ದೇಗುಲದಿಂದ ಪ್ರಸಿದ್ಧಿಯಾದ ಈ ಗ್ರಾಮದಲ್ಲಿ ಯುಗಾದಿ ಹಬ್ಬವೇ ನಡೆಯಲ್ಲ.
ಗ್ರಾಮಸ್ಥರ ನಿರ್ಧಾರದ ಹಿಂದೆ ಬಲವಾದ ಕಾರಣವೇ ಇದೆ. ಸುಮಾರು ಇನ್ನೂರು ವರ್ಷಗಳ ಹಿಂದೆ ಹರಕೆಗೆ ಬಿಟ್ಟ ಗೂಳಿ ಗ್ರಾಮದ ದಲಿತ ಕುಟುಂಬದ ಗರ್ಭಿಣಿಗೆ ತಿವಿದು ಊರ ಬಾಗಿಲ ಸಮೀಪ ಪ್ರಾಣ ಬಿಟ್ಟಿತ್ತಂತೆ. ಗರ್ಭಿಣಿ ಹಾಗೂ ಹೊಟ್ಟೆಯಲ್ಲಿದ್ದ ಭ್ರೂಣ ಕೂಡ ಮೃತಪಟ್ಟಿದ್ದರಂತೆ. ಈ ಬಗ್ಗೆ ಶಾಸ್ತ್ರ ಕೇಳಿದಾಗ ಯುಗಾದಿ ಹಬ್ಬ ಆಚರಿಸದಂತೆ ಸೂಚಿಸಿದ್ದರಂತೆ. ಇದೇ ಕಾರಣಕ್ಕೆ ಕುರುಡು ಮಲೆ ಗ್ರಾಮದಲ್ಲಿ ನಿನ್ನೆ ಬಿಕೋ ಎನ್ನುತ್ತಿತ್ತು. ನೂರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದ ಇಂಥದ್ದೊಂದು ಅಲಿಖಿತ ಆದೇಶವನ್ನು ಇಂದಿಗೂ ಜನ ಪಾಲಿಸುತ್ತಿರುವುದು ಆಶ್ಚರ್ಯದ ಸಂಗತಿ.