ತಾನು ಕದ್ದ ಲ್ಯಾಪ್'ಟಾಪ್ ಮಾರಲು ಅಂಗಡಿ ಇಟ್ಟ!

Published : Mar 03, 2017, 07:35 AM ISTUpdated : Apr 11, 2018, 12:37 PM IST
ತಾನು ಕದ್ದ ಲ್ಯಾಪ್'ಟಾಪ್ ಮಾರಲು ಅಂಗಡಿ ಇಟ್ಟ!

ಸಾರಾಂಶ

ಸಮೀರ್‌ ನಂಬರ್‌ಗೆ ಕರೆ ಮಾಡಿದ ಪೊಲೀಸರು, ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಬೇಕು ಎಂದು ಸ್ಥಳವೊಂದಕ್ಕೆ ಕರೆಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು(ಮಾ. 03): ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವೀಧರನೊಬ್ಬ ತಾನು ಕದ್ದ ಲ್ಯಾಪ್‌ಟಾಪ್‌ ಮಾರಲು ಎಲೆಕ್ಟ್ರಾನಿಕ್ಸ್‌ ಅಂಗಡಿಯನ್ನೇ ತೆರೆದು ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.  ಪಂಜಾಬ್‌ ಮೂಲದ ಸಮೀರ್‌ ಶರ್ಮಾ(32) ಬಂಧಿತ. ಈತನಿಂದ ಮಡಿವಾಳ ಪೊಲೀಸರು 151 ಲ್ಯಾಪ್‌ಟಾಪ್‌ಗಳು, 5 ಕ್ಯಾಮೆರಾಗಳು, 4 ಆ್ಯಪಲ್‌ ಐಪಾಡ್‌ಗಳು, 6 ಟ್ಯಾಬ್‌ಗಳು ಸೇರಿದಂತೆ ಒಟ್ಟಾರೆ ರು.72 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಅಪಾರ್ಟ್‌ಮೆಂಟ್‌ ಮತ್ತು ಪಿಜಿಗಳಲ್ಲಿ ಲ್ಯಾಪ್‌'ಟಾಪ್‌ ಕಳವು ಮಾಡುವುದನ್ನೇ ಈ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೂಲತಃ ಪಂಜಾಬ್‌ನ ಜಲಂಧರ್‌ನವನಾದ ಸಮೀರ್‌ ಶರ್ಮಾ 2009ರಲ್ಲಿ ಚಾಮರಾಜಪೇಟೆಯ ಐಐಎಂಡಿ ಕಾಲೇಜಿನಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವಿ ಪಡೆದಿದ್ದು, ಇದೇ ಕಾಲೇಜಿನಲ್ಲಿ ಏರ್‌ ಹೋಸ್ಟೆಸ್‌ ತರಬೇತಿ ಪಡೆದ ರಾಜೇಶ್ವರಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಬಳಿಕ ತನ್ನ ಐಷಾರಾಮಿ ಜೀವನಕ್ಕಾಗಿ ಸಾಫ್ಟ್‌'ವೇರ್‌ ಎಂಜಿನಿಯರ್‌ಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ವಾಸಿಸುವ ಕೋರಮಂಗಲ, ಮಡಿವಾಳ, ಮೈಕೋ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌, ಆಡುಗೋಡಿಗಳಲ್ಲಿರುವ ಪಿಜಿ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಸೆಕ್ಯುರಿಟಿ ಗಾರ್ಡ್‌ ಜತೆ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತನಾಡಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದ. ಬಳಿಕ ಪಿಜಿ ಒಳಗೆ ಹೋಗಿ ಸಿಕ್ಕ ಲ್ಯಾಪ್‌'ಟಾಪ್‌'ಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದ ಎಂದು ಅವರು ತಿಳಿಸಿದರು.

ಪತ್ನಿ ಹೆಸರಿನಲ್ಲಿ ಕಂಪ್ಯೂಟರ್‌ ಅಂಗಡಿ: ಕದ್ದ ಲ್ಯಾಪ್‌'ಟಾಪ್‌'ಗಳನ್ನು ಮಾರಾಟಲೆಂದೇ ಹೊಸಕೆರೆಹಳ್ಳಿಯ ಕಾಳಿದಾಸನಗರದ ಬಳಿ ಎಸ್‌.ಆರ್‌. ಕಂಪ್ಯೂಟರ್ಸ್‌ (ಸುಮೀರ್‌ ಮತ್ತು ರಾಜೇಶ್ವರಿ) ಅಂಗಡಿ ತೆರೆದಿದ್ದ. ಹೀಗೆ ಮಾರಾಟ ಮಾಡುತ್ತಿದ್ದ ಲ್ಯಾಪ್‌ಟಾಪ್‌ ಮತ್ತು ಇತರೆ ಎಲೆಕ್ಟ್ರಾನಿಕ್‌ ವಸ್ತುಗಳ ಬಗ್ಗೆ ರಾಜೇಶ್ವರಿ ಡೈರಿಯಲ್ಲಿ ಬರೆದುಕೊಳ್ಳುತ್ತಿದ್ದರು. ಈ ಡೈರಿಯೂ ಪತ್ತೆಯಾಗಿದೆ. ಇದರೊಂದಿಗೆ ಲ್ಯಾಪ್‌ಟಾಪ್‌ಗಳನ್ನು ಪ್ಯಾಕ್‌ ಮಾಡಿ ತಮಿಳುನಾಡಿನ ಕೊಯಮತ್ತೂರು, ಚೆನ್ನೈ ಮತ್ತು ಬೆಂಗಳೂರಿನ ಎಸ್‌.ಪಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದರು.

ನಮ್ಗು ಲ್ಯಾಪ್‌'ಟಾಪ್‌ ಬೇಕು: ಲ್ಯಾಪ್‌ಟಾಪ್‌ ಕಳವು ಪ್ರಕರಣವೊಂದರ ತನಿಖೆ ನಡೆಸುವ ವೇಳೆ ಲ್ಯಾಪ್‌ಟಾಪ್‌ನ ಐಎಂಇ ನಂಬರ್‌ ಚೆನ್ನೈನಲ್ಲಿ ಪತ್ತೆಯಾಗಿತ್ತು. ಇದರ ಜಾಡು ಹಿಡಿದ ಪೊಲೀಸರು, ಬೆಂಗಳೂರಿನ ಅಂಗಡಿಯಲ್ಲಿ ಖರೀದಿಸಿದ ಮಾಹಿತಿ ಸಂಗ್ರಹಿಸಿದರು. ಬಳಿಕ ಅಂಗಡಿ ಮಾಲೀಕನಿಗೆ ವಿಚಾರಣೆ ನಡೆಸಿದಾಗ ಸಮೀರ್‌ ಹೆಸರು ಕೇಳಿಬಂದಿತ್ತು. ನಂತರ ಸಮೀರ್‌ ನಂಬರ್‌ಗೆ ಕರೆ ಮಾಡಿದ ಪೊಲೀಸರು, ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ ಬೇಕು ಎಂದು ಸ್ಥಳವೊಂದಕ್ಕೆ ಕರೆಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಹೋಗಮ್ಮ ಸುಮ್ಮನೆ: ಸುದ್ದಿಗೋಷ್ಠಿ ವೇಳೆ ಸಮೀರ್‌ನನ್ನು ಪೊಲೀಸರು ಕರೆ ತಂದಿದ್ದರು. ಇದೇ ಸಂದರ್ಭದಲ್ಲಿ ಆರೋಪಿ ಕಂಡ ದೂರುದಾರ ಮಹಿಳೆಯೊಬ್ಬರು ‘ ನೀನು ನಮ್ಮ ಲ್ಯಾಪ್‌ಟಾಪ್‌ ಜತೆಗೆ ಚಿನ್ನಾಭರಣಗಳನ್ನು ಕಳವು ಮಾಡಿದ್ದೀಯಾ ಕೊಡು' ಎಂದರು, ಇದಕ್ಕೆ ಕೋಪದಿಂದಲೇ ಉತ್ತರಿಸಿದ ಆರೋಪಿ ಸಮೀರ್‌, ‘ನೀವೇನು ನನ್ನ ಕೈಗೆ ಕೊಟ್ಟಿದ್ರಾ? ನಾನೇ ತಗೊಂಡಿದ್ದು, ಹೋಗಮ್ಮ ಸುಮ್ಮನೆ' ಎಂದು ಪ್ರತಿಕ್ರಿಯಿಸಿದ. ಅಲ್ಲೇ ಪಕ್ಕದಲ್ಲಿದ್ದ ಕಾನ್‌ಸ್ಟೆಬಲ್‌ ‘ಚುಪ್‌ ರೇ' ಎಂದರು.

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!