
ಬೆಂಗಳೂರು : ನಿರ್ವಾಹಕಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ವರ್ಗಾವಣೆಯಾಗಿರುವ ಬಿಎಂಟಿಸಿ ಡಿಪೋ ಮ್ಯಾನೇಜರ್ ವಿರುದ್ಧ ಈಗ ನೌಕರರು ರಜೆ ಕೇಳಿದರೆ ಹೆಣದ ಜತೆ ಸೆಲ್ಫಿ ಕೇಳುತ್ತಿದ್ದ ವಿಚಾರವೂ ಬೆಳಕಿಗೆ ಬಂದಿದೆ.
ಬಿಎಂಟಿಸಿ ಘಟಕ 31ರ ವ್ಯವಸ್ಥಾಪಕರಾಗಿದ್ದ ಪ್ರಶಾಂತ್, ತಮ್ಮ ಊರುಗಳಲ್ಲಿ ಸಂಬಂಧಿಕರು, ಕುಟುಂಬದ ಸದಸ್ಯರು ಮೃತಪಟ್ಟಸಂದರ್ಭಗಳಲ್ಲಿ ರಜೆ ಕೊಡಿ ಎಂದು ಚಾಲಕ ಅಥವಾ ನಿರ್ವಾಹಕರು ಕೇಳಿದರೆ ಹೆಣದ ಜತೆ ಸೆಲ್ಫಿ ತೆಗೆದು ಕಳುಹಿಸುವಂತೆ ಹೇಳುತ್ತಿದ್ದರು. ಸಾವಿನ ಸುದ್ದಿ ಸತ್ಯವೆಂದರೂ ನಂಬುತ್ತಿರಲಿಲ್ಲ. ಹಾಗಾಗಿ ಅನಿರ್ವಾಯವಾಗಿ ನೌಕರರು ಹೆಣದ ಜತೆ ಸೆಲ್ಫಿ ತೆಗೆದು ಕಳುಹಿಸುತ್ತಿದ್ದರು. ಬಳಿಕ ರಜೆ ಸಿಗುತ್ತಿತ್ತು ಎಂಬ ವಿಚಾರ ತಿಳಿದು ಬಂದಿದೆ.
ಘಟಕ ವ್ಯವಸ್ಥಾಪಕ ಪ್ರಶಾಂತ್ ಕೆಲ ದಿನಗಳ ಹಿಂದೆ ನಿಗದಿತ ಆದಾಯ ತರುತ್ತಿಲ್ಲವೆಂದು ಮೊದಲ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕಿ ಜ್ಯೋತಿ ಎಂಬುವರ ಕರ್ತವ್ಯದ ಪಾಳಿಯನ್ನು ಸಾಮಾನ್ಯ ಪಾಳಿಗೆ ಬದಲಾಯಿಸಿದ್ದರು. ಮಗು ನೋಡಿಕೊಳ್ಳಲು ಸಮಯ ಬೇಕು. ಹಾಗಾಗಿ ಮೊದಲ ಪಾಳಿಯಲ್ಲೇ ಮುಂದುವರಿಸುವಂತೆ ಜ್ಯೋತಿ ಮನವಿ ಮಾಡಿದರೂ ನಿರಾಕರಿಸಿದ್ದರು. ಇದರಿಂದ ಮನನೊಂದು ನಿರ್ವಾಹಕಿ ಜ್ಯೋತಿ ಘಟಕದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಈ ಘಟನೆಯಿಂದ ರೊಚ್ಚಿಗೆದ್ದ ಚಾಲಕ ಮತ್ತು ನಿರ್ವಾಹಕರು ಬಸ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಪ್ರಶಾಂತ್ ವಿರುದ್ಧ ಧರಣಿಗೆ ಮುಂದಾಗಿದ್ದರು. ಕ್ಷುಲ್ಲಕ ಕಾರಣಗಳಿಗೆ ನೌಕರರನ್ನು ಶೋಷಿಸುತ್ತಾರೆ ಎಂದು ಸಾಲು ಸಾಲು ಆರೋಪ ಮಾಡಿದ್ದರು. ಕೂಡಲೇ ಪ್ರಶಾಂತ್ ಅವರನ್ನು ವರ್ಗಾವಣೆಗೊಳಿಸುವಂತೆ ಪಟ್ಟು ಹಿಡಿದಿದ್ದರು. ನೌಕರರ ಒತ್ತಡಕ್ಕೆ ಮಣಿದ ಬಿಎಂಟಿಸಿ, ಘಟಕದ ವ್ಯವಸ್ಥಾಪಕ ಪ್ರಶಾಂತ್, ಹಾಗೂ ಆತನಿಗೆ ಕುಮ್ಮಕ್ಕು ನೀಡುತ್ತಿದ್ದ ಸಹಾಯಕ ಸಂಚಾರ ಅಧೀಕ್ಷಕ ರವಿಕುಮಾರ್, ಸಂಚಾರ ನಿಯಂತ್ರಕ ದಸ್ತಗೀರ್ ಹಾಗೂ ಕಚೇರಿ ಸಹಾಯಕನೊಬ್ಬನನ್ನು ವರ್ಗಾವಣೆಗೊಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.