
ಆಂಧ್ರಪ್ರದೇಶದ ತಿರುಪತಿ ದೇವಾಲಯ ಲಡ್ಡು ಪ್ರಸಾದಕ್ಕೆ ಪ್ರಸಿದ್ಧವಾದರೆ ಪಳನಿಯ ಮುರುಗನ್ ದೇವಾಲಯ ಪಂಚಾಮೃತಕ್ಕೆ ಪ್ರಸಿದ್ಧಿ. ಇನ್ನು ಕರ್ನಾಟಕದ ಕೆಲ ದೇವರಿಗೆ ಸಿಗರೇಟು, ಮದ್ಯ ನೈವೇದ್ಯ ಮಾಡೋದೂ ಉಂಟು.
ಚೆನ್ನೈನಿಂದ 40 ಕಿ.ಮೀ. ದೂರದಲ್ಲಿರುವ ಪಡಪ್ಪೈನಲ್ಲಿ ಜಯ ದುರ್ಗಾ ಪೀಠ ಎಂಬ ದೇವಾಲಯವಿದೆ. ಅಲ್ಲಿ ಬರ್ಗರ್ ಮತ್ತು ಕೇಕ್ ಪ್ರಸಾದವನ್ನು ನೀಡಲಾಗುತ್ತದೆ. ತೀರ್ಥ ರೂಪದಲ್ಲಿ ಮಿನರಲ್ ವಾಟರ್ ನೀಡಲಾಗುತ್ತದೆ. ಅಂತೆಯೇ ಇದು ಇನ್ನೂ ಹಲವು ವಿಷಯಗಳಲ್ಲಿ ಹೈಟೆಕ್ ದೇಗುಲ.
ಕೇಕ್'ಗಳಿಗೆ ಯಾವುದೇ ಮೊಟ್ಟೆಹಾಕುವುದಿಲ್ಲವಂತೆ. ಸ್ಯಾಂಡ್‌ವಿಚ್, ವೆಜಿಟೆಬಲ್ ಕಟ್ಲೆಟ್, ಟೊಮೆಟೋ ಸಲಾಡ್, ಫುಲ್ಕಾಗಳನ್ನೂ ನೀಟಾಗಿ ಪ್ಯಾಕ್ ಮಾಡಿ ಪ್ರಸಾದ ವಿನಿಯೋಗಿಸಲಾಗುತ್ತದೆ.
ಬಾದಾಮಿ ಹಾಲು ಸೇರಿ ಹಲವು ಶಕ್ತಿವರ್ಧಕ ಪೇಯಗಳೂ ಲಭ್ಯವಿವೆ. ಭಕ್ತರಲ್ಲಿ ಈ ಪ್ರಸಾದ ತುಂಬಾ ಜನಪ್ರಿಯವಾಗಿ ದೆಯಂತೆ. ಪ್ರಸಾದ ನೀಡಲು ವೆಂಡಿಂಗ್ ಮಶಿನ್ ಹಾಕಲಾಗಿದ್ದು, ಅಲ್ಲಿಂದಲೇ ಚೀಟಿ ಪಡೆದು ಪ್ರಸಾದ ಪಡೆಯಬಹುದಾಗಿದೆ. ದೇವಾಲಯ ಭಿನ್ನವಾಗಿರಬೇಕು. ಈಗಿನ ಮಕ್ಕಳು ದೇವಾಲಯದತ್ತ ಆಕರ್ಷಿತರಾಗಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇವೆ ಎಂದು ದೇಗುಲದ ಸ್ಥಾಪಕರಾದ ಡಾ| ಕೆ. ಶ್ರೀ ಶ್ರೀಧರ್ ಹೇಳುತ್ತಾರೆ.
ಅರ್ಚಕರು ಕೈಯಲ್ಲಿ ಪ್ರಸಾದ ಮುಟ್ಟಿನೀಡುವುದು ಅಶುಚಿತ್ವವಾಗುತ್ತದೆ. ಹೀಗಾಗಿ ಪ್ಯಾಕ್‌್ಡ ಪ್ರಸಾದಕ್ಕೆ ನಿರ್ಧರಿಸಿದೆವು. ಮೊದಮೊದಲು ಪ್ಯಾಕ್‌್ಡ ರೋಟಿ, ದಾಲ್, ಚಿತ್ರಾನ್ನ ನೀಡಿದೆವು. ಕೊನೆಗೆ ಬರ್ಗರ್ ಮತ್ತು ಕೇಕ್ ಏಕೆ ನೀಡಬಾರದೆಂದು ಅದನ್ನೂ ಆರಂಭಿಸಿದೆವು ಎಂತಾರೆ ಶ್ರೀಧರ್. ಈ ರೀತಿಯ ಪ್ರಸಾದ ವಿತರಣೆ ಸಂಪ್ರದಾಯದ ಉಲ್ಲಂಘನೆ ಎಂದು ಕೆಲವು ದೇಗುಲಗಳಿಂದ ವಿರೋಧ ಬಂತು. ಆದರೆ ನಮ್ಮತ್ತ ಮಕ್ಕಳು ಆಕರ್ಷಿತರಾದರು. ಆಗ ವಿರೋಧ ತಂತಾನೇ ನಿಂತಿತು ಎಂದು ಶ್ರೀಧರ್ ಹೇಳುತ್ತಾರೆ.
ದಿನಕ್ಕೊಂದರಂತೆ ಪ್ರಸಾದದ ವಿಶೇಷ ಇರುತ್ತದೆ. ಬರೀ ಪ್ರಸಾದ ಇದ್ದರೆ ಸಾಲದು ಶುದ್ಧ ನೀರೂ ಇರಬೇಕು ಎಂದು ಮಿನರಲ್ ವಾಟರ್ ನೀಡಲಾರಂಭಿಸಿದ್ದೇವೆ. 500 ಎಂಎಲ್ ಮಿನರಲ್ ವಾಟರ್ ಬಾಟಲಿಯನ್ನು ಭಕ್ತರಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ತಿಳಿಸುತ್ತಾರೆ. ದೇಣಿಗೆ ಯಿಂದಲೇ ನಡೆಯುವ ಈ ದೇವಾಲಯ ಬೆಳಗ್ಗೆ 6ರಿಂದ 12 ಹಾಗೂ ಸಂಜೆ 4ರಿಂದ 8ರವರೆಗೆ ತೆರೆದಿರುತ್ತದೆ.
ಆದರೆ ದೇಗುಲದಲ್ಲಿ ಹುಂಡಿ ಇಟ್ಟಿಲ್ಲ. ಅರ್ಚಕರು ತಟ್ಟೆದಕ್ಷಿಣೆಯನ್ನೂ ಸ್ವೀಕರಿಸಲ್ಲ. ಹೆಚ್ಚಾಗಿ ಇಲ್ಲಿ ಭಕ್ತರು ಸೇವೆ ಮತ್ತು ಪ್ರಸಾದವನ್ನು ‘ಸ್ಪಾನ್ಸರ್' ಮಾಡುತ್ತಾರಂತೆ. ಕಾಲ ಬದಲಾದಂತೆ ಇಲ್ಲಿನ ದರ್ಶನವೂ ಹೈಟೆಕ್ ಆಗಿದೆ. ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಮೊಬೈಲ್ ನಂಬರ್ ನೋಂದಣಿ ಮಾಡಬೇಕು. ಆಗ ಎಸ್ಸೆಮ್ಮೆಸ್ ಮೂಲಕ ದೇಗುಲಕ್ಕೆ ಸ್ವಾಗತಿಸಲಾಗುತ್ತದೆ. ದೇವಾಲಯದ ಸೇವೆ, ವಿಶೇಷ ಸಂದರ್ಭದ ವಿವರಗಳು ಕಾಲಕಾಲಕ್ಕೆ ಎಸ್ಸೆಮ್ಮೆಸ್ ಮೂಲಕ ರವಾನೆಯಾಗುತ್ತವೆ.
ಇನ್ನು ಉರುಳುಸೇವೆ ಮಾಡುವ ಮುನ್ನ ರಕ್ತದೊತ್ತಡ ಪರೀಕ್ಷಿಸಲು ವೈದ್ಯರನ್ನು ನಿಯೋಜಿಸಲಾಗಿದೆ. ವೈದ್ಯರು ಶಿಫಾರಸು ಮಾಡಿದರೆ ಮಾತ್ರ ಉರುಳುಸೇವೆ ಮಾಡಬಹುದು. ದೇಗುಲದಲ್ಲಿ ಸ್ನಾನ ಮಾಡಿದವರು ಕೂದಲು ಒಣಗಿಸಿಕೊಳ್ಳಲು ಹೇರ್ ಡ್ರೈಯರ್ ವ್ಯವಸ್ಥೆ ಮಾಡಲಾಗಿದೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.