ಮೋದಿ ಸಂಪುಟದಲ್ಲಿ ರಾಜ್ಯದ ಯಾರಿಗೆ ಮಂತ್ರಿಗಿರಿ?| ಹಳೆ ಸಚಿವರು ಮುಂದುವರೀತಾರಾ? ಹೊಸಬರು ಬರ್ತಾರಾ?| ಪ್ರಹ್ಲಾದ್ ಜೋಶಿ, ಜಾಧವ್, ಶೋಭಾ, ಸುರೇಶ್ ಅಂಗಡಿ ಹೆಸರು ಪ್ರಸ್ತಾಪ
ಬೆಂಗಳೂರು[ಮೇ.25]: ಇದೇ ತಿಂಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬರಲಿದ್ದು, ಈ ಬಾರಿ ರಾಜ್ಯದಿಂದ ಯಾರಿಗೆ ಸಚಿವ ಸ್ಥಾನದ ಅವಕಾಶ ಸಿಗುತ್ತದೆ ಎಂಬ ಕುತೂಹಲ ಗರಿಗೆದರಿದೆ.
ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ರಾಜ್ಯದಿಂದ ಮೂವರು ಸಚಿವರು ಕೇಂದ್ರದಲ್ಲಿದ್ದರು. ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ ಹಾಗೂ ಅನಂತಕುಮಾರ್ ಹೆಗಡೆ. ಈ ಪೈಕಿ ಯಾರಿಗೆ ಮತ್ತೊಮ್ಮೆ ಅವಕಾಶ ಸಿಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಮೂವರನ್ನೂ ಕೈಬಿಟ್ಟು ಹೊಸಬರಿಗೇ ಮಣೆ ಹಾಕುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
undefined
ಹೊಸ ಸರ್ಕಾರದಲ್ಲಿ ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ, ಕಲಬುರಗಿಯ ನೂತನ ಸಂಸದ ಡಾ.ಉಮೇಶ್ ಜಾಧವ್, ಉಡುಪಿ-ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಹಾಗೂ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಆದರೆ, ಯಾರಿಗೆ ಅವಕಾಶ ಸಿಗುತ್ತದೆ ಎಂಬುದರ ಸುಳಿವು ಕೂಡ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲ ಎಂದು ತಿಳಿದು ಬಂದಿದೆ.
ಜಾತಿ ಮತ್ತು ಪ್ರಾದೇಶಿಕ ಸಮತೋಲನ ಮಾಡುವ ನಿರೀಕ್ಷೆ ಇದ್ದರೂ ಮೋದಿ ಅವರು ಇದಕ್ಕೆಲ್ಲ ಹೆಚ್ಚು ಪ್ರಾಮುಖ್ಯತೆ ನೀಡುವುದು ಕಡಮೆ ಎಂದೂ ಹೇಳಲಾಗುತ್ತಿದೆ. ಉತ್ತಮವಾಗಿ ಕೆಲಸ ಮಾಡಬಲ್ಲ ಸಾಮರ್ಥ್ಯ ಹೊಂದಿದವರಿಗೆ ಅವಕಾಶ ನೀಡುವ ಉದ್ದೇಶವಿದೆ ಎನ್ನಲಾಗಿದೆ.
ಪ್ರಹ್ಲಾದ್ ಜೋಶಿ ಹಾಗೂ ಉಮೇಶ್ ಜಾಧವ್ ಅವರಿಗೆ ಸಚಿವ ಸ್ಥಾನ ಲಭಿಸುವ ಸಂಭವ ಹೆಚ್ಚಾಗಿದೆ. ಡಿ.ವಿ.ಸದಾನಂದಗೌಡ ಅಥವಾ ಶೋಭಾ ಕರಂದ್ಲಾಜೆ ಅವರ ಪೈಕಿ ಒಬ್ಬರಿಗೆ ಅವಕಾಶ ನೀಡಬಹುದು. ಅದೇ ರೀತಿ ಸುರೇಶ್ ಅಂಗಡಿ ಅಥವಾ ಶಿವಕುಮಾರ್ ಉದಾಸಿ ಅವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ.