ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷದ ಒಬ್ಬ ಅಭ್ಯರ್ಥಿಯೂ ಗೆದ್ದಿಲ್ಲ

By Web DeskFirst Published May 25, 2019, 8:40 AM IST
Highlights

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಈ ಪಕ್ಷದ ಅಭ್ಯರ್ಥಿಗಳ್ಯಾರೂ ಕೂಡ ಗೆಲುವು ಪಡೆದಿಲ್ಲ. 

ಬೆಂಗಳೂರು :  ಕನ್ನಡ ಚಿತ್ರರಂಗ ನಟ ಉಪೇಂದ್ರ ಸ್ಥಾಪಿಸಿರುವ ಉತ್ತಮ ಪ್ರಜಾಕೀಯ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಲವು ಕ್ಷೇತ್ರದಲ್ಲಿ ಕಣಕ್ಕಿಳಿದರೂ ಪ್ರಧಾನಿ ನರೇಂದ್ರ ಅಲೆಗೆ ಕೊಚ್ಚಿಹೋಗಿದೆ.

ರಾಜಕೀಯದಲ್ಲಿ ಮೊದಲ ಹೆಜ್ಜೆಯನ್ನಿಟ್ಟಿರುವ ಉಪೇಂದ್ರ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ, ಜನರನ್ನು ತನ್ನತ್ತ ಸೆಳೆಯುವಲ್ಲಿ ಉಪೇಂದ್ರ ಪಕ್ಷದ ಅಭ್ಯರ್ಥಿಗಳು ವಿಫಲವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಠೇವಣಿ ಕಳೆದುಕೊಂಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಕೆಪಿಜೆಪಿಯಿಂದ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಿದ್ಧತೆ ನಡೆಸಿದ್ದರು. ಆದರೆ, ಮೊದಲು ಆರಂಭಿಸಿದ್ದ ಕೆಪಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಂಡ ಕಾರಣ ಆ ಪಕ್ಷವನ್ನು ತೊರೆದರು. ತರುವಾಯ ತಮ್ಮದೇ ಆದ ಉತ್ತಮ ಪ್ರಜಾಕೀಯ ಪಕ್ಷ ಆರಂಭಿಸಿ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.

ವಿಭಿನ್ನವಾಗಿ ರಾಜಕಾರಣ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿರುವ ಉಪೇಂದ್ರ ಪಕ್ಷದ ಅಭ್ಯರ್ಥಿಗಳು ಜನರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ. ಬಹುತೇಕ ಮತದಾರರಿಗೆ ಉಪೇಂದ್ರ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದೂ ಗೊತ್ತಿರಲಿಲ್ಲ. ಒಂದು ಬಾರಿ ಆಯಾ ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಿಗೆ ತೆರಳಿ ಪತ್ರಿಕಾಗೋಷ್ಠಿ ನಡೆಸಿದ್ದು ಬಿಟ್ಟರೆ ಉಪೇಂದ್ರ ಅವರು ಮತ್ತೆ ಪ್ರಚಾರಕ್ಕೆ ತೆರಳಲೇ ಇಲ್ಲ.

ರಾಜಕೀಯ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರುವ ಸಲುವಾಗಿ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಲಾಗಿದೆ. ಪ್ರಜಾಕೀಯ ಪಕ್ಷದಲ್ಲಿ ಪ್ರಜೆಗಳೇ ನಾಯಕರಾಗಿದ್ದು, ಬೇರೆ ಯಾರೂ ಇಲ್ಲಿ ನಾಯಕರಿಲ್ಲ. ನಾನು ಪಕ್ಷಕ್ಕೆ ಸಾರಥಿಯಷ್ಟೆ. ರಾಜಕಾರಣಿಯಲ್ಲ, ಪ್ರಜಾಕಾರಣಿ. ಸಮಾಜದಲ್ಲಿ ಸ್ವಚ್ಛ ಮತ್ತು ಪಾರದರ್ಶಕ ಸರ್ಕಾರ ಸ್ಥಾಪನೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಅಲ್ಲದೇ, ಸ್ವಚ್ಛ ಆಡಳಿತಕ್ಕೆ ಕೈ ಜೋಡಿಸಬೇಕು ಎಂಬ ಉಪೇಂದ್ರ ಅವರ ಮನವಿ ಮತದಾರರಿಗೆ ತಲುಪಲಿಲ್ಲ.

click me!