
ಕೊಪ್ಪಳ: ದೇಶದಲ್ಲಿ ಯಾವ ಸಮ್ಮಿಶ್ರ ಸರ್ಕಾರಗಳೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ. ರಾಜ್ಯದ ಸಮ್ಮಿಶ್ರ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ. ಪೂರ್ಣಾವಧಿ ಸರ್ಕಾರವೇ ಇಲ್ಲ ಎಂದ ಮೇಲೆ ಕುಮಾರಸ್ವಾಮಿ ಪೂರ್ಣಾವಧಿ ಸಿಎಂ ಹೇಗೆ ಆಗುತ್ತಾರೆ ಎಂದು ಶಾಸಕ ಬಿ.ಶ್ರೀರಾಮುಲು ಪ್ರಶ್ನಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮ್ಮಿಶ್ರ ಸರ್ಕಾರದ ಐದು ವರ್ಷದ ಅವಧಿಗೂ ಕುಮಾರಸ್ವಾಮಿ ಅವರೇ ಸಿಎಂ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಸರ್ಕಾರ ಪೂರ್ಣಾವಧಿ ಪೂರೈಸುವುದಿಲ್ಲ. ದೇಶದಲ್ಲಿ ಅನೇಕ ಸಮ್ಮಿಶ್ರ ಸರ್ಕಾರಗಳು ಬಂದು ಹೋಗಿವೆ. ಆದರೆ, ಯಾವ ಸರ್ಕಾರವೂ ಪೂರ್ಣಾವಧಿ ಪೂರೈಸಿಲ್ಲ. ನಾನು ಹೇಳುತ್ತಿರುವುದು ಭವಿಷ್ಯವಲ್ಲ. ಇತಿಹಾಸದ ದಾಖಲೆ ಎಂದರು.
ಕಾನೂನಿಗೆ ಡಿಕೆಶಿ ಹೊರತಲ್ಲ:
ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಅವರೇನೂ ಕಾನೂನಿಗೆ ಹೊರತಲ್ಲ. ಕಾನೂನು ಪರಿಧಿಯಲ್ಲಿಯೇ ಅವರು ಬರುವುದರಿಂದ ಸಿಬಿಐ ಅಥವಾ ಇಡಿ ದಾಳಿ ಮಾಡಿರಬಹುದು. ಇವು ಸ್ವತಂತ್ರ ಸಂಸ್ಥೆಯಾಗಿರುವುದರಿಂದ ಸೇಡಿನಿಂದ ಕೇಂದ್ರ ಸರ್ಕಾರ ಐಟಿ ದಾಳಿ ನಡೆಸುತ್ತದೆ ಎಂಬುದು ಸರಿಯಲ್ಲ. ಹಿಂದೆ ಯುಪಿಎ ಸರ್ಕಾರ ಇದ್ದಾಗಲೂ ಏನಾಗಿದೆ ಎನ್ನುವುದನ್ನು ತೆಗೆದು ನೋಡಲಿ ಎಂದರು.
ನಮ್ಮೊಂದಿಗೆ ಯಾವ ಶಾಸಕರು ಸಂಪರ್ಕದಲ್ಲಿಲ್ಲ. ಮತ್ತೆ ಸರ್ಕಾರ ರಚಿಸುವ ಸಾಹಸ ಮಾಡಲ್ಲ. ಸದನದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು, ‘ಆತ್ಮಸಾಕ್ಷಿಯಿಂದ ಬರುವುದಾದರೆ ಬನ್ನಿ ಎಂದು ಕರೆದಿದ್ದೇವೆ’ ಎಂದು ಹೇಳಿದ್ದಾರೆಯೇ ಹೊರತು, ನಾವು ಕುದುರೆ ವ್ಯಾಪಾರ ಮಾಡಿಲ್ಲ ಎಂದರು.
2019ರಲ್ಲೂ ಮೋದಿ ಸರ್ಕಾರ:
ಕೇಂದ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲೂ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ. ವಿರೋಧಿಗಳು ಎಷ್ಟೇ ಒಂದಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ. ಎಲ್ಲೋ ಒಂದು ಉಪಚುನಾವಣೆಯಲ್ಲಿ ಸೋತ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಗಾಳಿ ಇದೆ ಎನ್ನುವುದು ತಪ್ಪು. ಅವರ ಶಕ್ತಿಯನ್ನು ಮಣಿಸಲು ಸಾಧ್ಯವಿಲ್ಲ ಎಂದು ಗೊತ್ತಾಗಿ ಎಲ್ಲ ರಾಜಕೀಯ ಪಕ್ಷಗಳು ಯುಪಿಎ ಅಡಿಯಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ಹಿಟ್ನಾಳ ಸಿದ್ದು ದತ್ತುಪುತ್ರ
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮಾಜಿ ಸಿಎಂ ಸಿದ್ದರಾಮಯ್ಯಅವರ ದತ್ತುಪುತ್ರ. ಅಷ್ಟೇ ಅಲ್ಲ, ಅವರು ಲಕ್ಷ್ಮೇ ಪುತ್ರರು ಎಂದು ಇದೇ ವೇಳೆ ಶ್ರೀರಾಮುಲು ಹೇಳಿದರು.
ಕೊಪ್ಪಳ ಮತ್ತು ಕುಷ್ಟಗಿಯಲ್ಲಿ ಬಿಜೆಪಿ ಸೋಲಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿ, ಈ ಎರಡು ಕಡೆ ನಮ್ಮ ಸೋಲಿಗೆ ಸಂಪನ್ಮೂಲದ ಕೊರತೆ ಕಾರಣವಾಯಿತು. ಕೊಪ್ಪಳ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ದತ್ತು ಪುತ್ರ ಹಾಗೂ ಲಕ್ಷ್ಮೇ ಪುತ್ರ. ಅವರಿಗೇನು ಕಡಿಮೆ ಇದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರು ಏನೆಲ್ಲಾ ಮಾಡಿದ್ದಾರೆ ಗೊತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.