ಅಂದು ಆಪ್ತ ಸಹಾಯಕ, ಇಂದು ಪ್ರಧಾನಿಗೇ ಬಾಸ್!

Published : Jul 21, 2017, 03:29 PM ISTUpdated : Apr 11, 2018, 01:07 PM IST
ಅಂದು ಆಪ್ತ ಸಹಾಯಕ, ಇಂದು ಪ್ರಧಾನಿಗೇ ಬಾಸ್!

ಸಾರಾಂಶ

ವರ್ಷಾರಂಭದಲ್ಲಿ ಕೋವಿಂದ್ ಅವರು ಹಿಮಾಚಲಪ್ರದೇಶದ ಶಿಮ್ಲಾದಲ್ಲಿರುವ ರಾಷ್ಟ್ರಪತಿಗಳ ಬಂಗಲೆಗೆ ಭೇಟಿ ನೀಡಿದಾಗ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ವಾಪಸ್ ಕಳುಹಿಸಲಾಗಿತ್ತು. ಈಗ ಕೋವಿಂದ್ ಅವರನ್ನು ತಡೆಯುವವರು ಯಾರೂ ಇಲ್ಲ.

ರಾಷ್ಟ್ರಪತಿಯಾಗಿ ಚುನಾಯಿತರಾಗುವುದರೊಂದಿಗೆ ಕೆ.ಆರ್. ನಾರಾಯಣನ್ ಬಳಿಕ ದೇಶದ ಪ್ರಥಮ ಪ್ರಜೆ ಹುದ್ದೆಗೇರಿದ ಎರಡನೇ ದಲಿತ ಎಂಬ ಹಿರಿಮೆಗೆ ರಾಮನಾಥ ಕೋವಿಂದ್ ಭಾಜನರಾಗಿದ್ದಾರೆ.

1945ರ ಅ.1ರಂದು ಉತ್ತರಪ್ರದೇಶದ ಕಾನ್ಪುರದಲ್ಲಿ ಜನಿಸಿದ ಕೋವಿಂದ್ ಅವರು ವಾಣಿಜ್ಯ ಹಾಗೂ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಕಾನ್ಪುರದಲ್ಲಿ ಕಾನೂನು ಪದವಿ ಪಡೆದ ಬಳಿಕ ಐಎಎಸ್ ಅಧಿಕಾರಿಯಾಗಬೇಕು ಎಂಬ ಆಸೆಯೊಂದಿಗೆ ದೆಹಲಿಗೆ ರೈಲು ಹತ್ತಿದ್ದರು. ಮೂರನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿದರಾದರೂ ಬಯಸಿದ ಐಎಎಸ್ ಹುದ್ದೆ ಸಿಗಲಿಲ್ಲ. ಹೀಗಾಗಿ ಬೇಸರಗೊಂಡು ಅವರು ಕಾನೂನು ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌'ಗಳಲ್ಲಿ ಸರ್ಕಾರಿ ವಕೀಲರಾಗಿಯೂ ಸೇವೆ ಸಲ್ಲಿಸಿದರು.

ದೇಶದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಆಪ್ತಸಹಾಯಕರಾಗಿಯೂ ಕೆಲಸ ಮಾಡಿದರು. 1991ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಅವರು 1998ರಿಂದ 2002ರವರೆಗೆ ಬಿಜೆಪಿ ದಲಿತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಈ ಮಧ್ಯೆ ಉತ್ತರಪ್ರದೇಶದಲ್ಲಿ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರಾದರೂ ಗೆಲುವು ಸಿಗಲಿಲ್ಲ. 1994ರ ಏಪ್ರಿಲ್‌'ನಲ್ಲಿ ಮೊದಲ ಬಾರಿ ರಾಜ್ಯಸಭೆಗೆ ಆಯ್ಕೆಯಾದ ಕೋವಿಂದ್, ಪುನಾರಾಯ್ಕೆಯಾಗಿ 2006ರವರೆಗೆ ಸಂಸದರಾಗಿದ್ದರು. 2015ರ ಆ.8ರಂದು ಕೇಂದ್ರ ಸರ್ಕಾರ ಅವರನ್ನು ಬಿಹಾರ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು.

ವರ್ಷಾರಂಭದಲ್ಲಿ ಕೋವಿಂದ್ ಅವರು ಹಿಮಾಚಲಪ್ರದೇಶದ ಶಿಮ್ಲಾದಲ್ಲಿರುವ ರಾಷ್ಟ್ರಪತಿಗಳ ಬಂಗಲೆಗೆ ಭೇಟಿ ನೀಡಿದಾಗ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ವಾಪಸ್ ಕಳುಹಿಸಲಾಗಿತ್ತು. ಈಗ ಕೋವಿಂದ್ ಅವರನ್ನು ತಡೆಯುವವರು ಯಾರೂ ಇಲ್ಲ.

71 ವರ್ಷದ ಕೋವಿಂದ್ ಅವರದ್ದು ಪತ್ನಿ ಸವಿತಾ ಕೋವಿಂದ್, ವಿವಾಹಿತ ಪುತ್ರ ಪ್ರಶಾಂತ್ ಕುಮಾರ್ ಹಾಗೂ ಪುತ್ರಿ ಸ್ವಾತಿ ಅವರು ಇರುವ ಪುಟ್ಟ ಕುಟುಂಬ.

ದಲಿತ ರಾಷ್ಟ್ರಪತಿ, ಒಬಿಸಿ ಪ್ರಧಾನಿ:
ವಿ.ಪಿ. ಸಿಂಗ್ ಅವರು ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತಂದಾಗ ರಾಮಜನ್ಮಭೂಮಿಗಾಗಿ ಹಿಂದುಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದ ‘ಕಮಂಡಲ’ ಪಕ್ಷದ ಕತೆ ಮುಗಿಯಿತು ಎಂದೇ ಹಲವರು ಭವಿಷ್ಯ ನುಡಿದಿದ್ದರು. ಆದರೆ ಸದ್ಯ ಬಿಜೆಪಿಯಲ್ಲಿ ಅದು ಉಲ್ಟಾ ಆಗಿದೆ. ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಕೋವಿಂದ್ (ದಲಿತ), ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿರುವ ವೆಂಕಯ್ಯ ನಾಯ್ಡು (ಒಬಿಸಿ) ಹಾಗೂ ಪ್ರಧಾನಿ ನರೇಂದ್ರ ಮೋದಿ (ಒಬಿಸಿ) ಅವರಿಗೆ ಮಣೆ ಹಾಕುವ ಮೂಲಕ ‘ಬ್ರಾಹ್ಮಣರು- ಬನಿಯಾಗಳ ಪಕ್ಷ’ ಎಂಬ ಹಣೆಪಟ್ಟಿಯನ್ನು ಬಿಜೆಪಿ ಸ್ಪಷ್ಟವಾಗಿ ಕಳಚಿ ಎಸೆದಂತಾಗಿದೆ. ಜತೆಗೆ ಕಾಂಗ್ರೆಸ್ಸಿನ ಪರಂಪರಾಗತ ಮತ ಬ್ಯಾಂಕ್ ಹಾಕಿದ್ದ ಒಬಿಸಿ- ದಲಿತ ಮತ ಬ್ಯಾಂಕಿಗೆ ಕನ್ನ ಹಾಕಿದಂತಾಗಿದೆ.

ಮೂರೂ ಉನ್ನತ ಹುದ್ದೆಗೆ ಆರೆಸ್ಸೆಸ್ಸಿಗರು:
ಆರ್‌ಎಸ್‌ಎಸ್ ಹಿನ್ನೆಲೆಯ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾರೆ. ಅದೇ ಹಿನ್ನೆಲೆ ಹೊಂದಿರುವ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದಾರೆ. ಆರ್‌ಎಸ್‌ಎಸ್‌ನಿಂದಾಗಿ ರಾಜಕೀಯದಲ್ಲಿ ಬೆಳೆದು ಬಂದ ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಅಭ್ಯರ್ಥಿಯಾಗಿದ್ದು, ಗೆಲುವು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಸ್ವತಂತ್ರ ಭಾರತದ 70 ವರ್ಷಗಳ ಇತಿಹಾಸದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿ ಮೂರೂ ಹುದ್ದೆಗಳನ್ನು ಆರ್‌ಎಸ್‌ಎಸ್ ಹಿನ್ನೆಲೆಯವರು ಅಲಂಕರಿಸಿದಂತಾಗಿದೆ.

epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ