
ಮಂಗಳೂರು(ಮಾ.29): ಜಾಗತಿಕ ಜೀವನ ವೆಚ್ಚ, ಬಾಡಿಗೆ ದರ, ದಿನಸಿ ಬೆಲೆ, ಹೋಟೆಲ್ ವೆಚ್ಚ, ಜನರ ಕೊಳ್ಳುವ ಶಕ್ತಿ, ಹವಾಮಾನ, ಸಂಚಾರ ದಟ್ಟಣೆ ಮುಂತಾದ ಮಾನದಂಡಗಳನ್ನು ಇಟ್ಟುಕೊಂಡು ಜನರ ಜೀವನ ಗುಣಮಟ್ಟಅಳೆಯುವ ನಿಟ್ಟಿನಲ್ಲಿ ಜಾಗತಿಕ ಸಮೀಕ್ಷಾ ಸಂಸ್ಥೆ ‘ನಂಬಿಯೊ' ಒಂದು ವಿಶಿಷ್ಟಸಮೀಕ್ಷೆ ನಡೆಸಿದ್ದು, ಅದರಲ್ಲಿ ರಾಜ್ಯದ ಮಂಗಳೂರು ದೇಶದ ಇತರ ನಗರಗಳನ್ನು ಹಿಂದಿಕ್ಕಿ ಮುಂಚೂಣಿಯಲ್ಲಿದೆ. ಜಾಗತಿಕ ಜೀವನ ಮಟ್ಟದ ಕುರಿತು ಪ್ರತಿ ವರ್ಷವೂ ಆಯ್ದ ಪ್ರಮುಖ ನಗರಗಳಲ್ಲಿ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ನಡೆಸುವ ನಂಬಿಯೊ, ಈ ಬಾರಿಯ ಸಮೀಕ್ಷೆ ಪ್ರಕಟಿಸಿದ್ದು, ಈ ಎಲ್ಲ ಮಾನದಂಡಗಳಲ್ಲೂ ಮಂಗಳೂರು ದೇಶದ ಇತರ ನಗರಗಳಿಗಿಂತ ಉತ್ತಮ ಎನಿಸಿಕೊಂಡಿದೆ.
ಒಟ್ಟು 177 ಜಾಗತಿಕ ಪ್ರಮುಖ ನಗರಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಭಾರತದ ಮುಂಬೈ, ಕೊಲ್ಕತಾ, ದೆಹಲಿ, ಚೆನ್ನೈ, ಬೆಂಗಳೂರು, ಗುರುಗ್ರಾಮ, ಅಹಮದಾಬಾದ್, ಕೊಯಮತ್ತೂರು, ಹೈದರಾಬಾದ್, ಪುಣೆ ಹಾಗೂ ಮಂಗಳೂರು ನಗರಗಳ ಜೀವನ ಗುಣಮಟ್ಟದ ಕುರಿತ ವಿವರಗಳನ್ನು ಪ್ರಕಟಿಸಲಾಗಿದೆ. ಹವಾಗುಣದ ಸೂಚ್ಯಂಕ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ ಮಂಗಳೂರು ದೇಶದ ಇತರ ಎಲ್ಲಾ ನಗರಗಳಿಗಿಂತ ಉತ್ತಮ ಎಂಬುದು ಸಮೀಕ್ಷೆಯಿಂದ ಖಾತರಿಯಾಗಿದೆ. ಸಮೀಕ್ಷೆಗೆ ಒಳಪಟ್ಟನಗರಗಳ ಪೈಕಿ ಅತ್ಯಂತ ಕನಿಷ್ಠ ಮಾಲಿನ್ಯ ಮಟ್ಟಇರುವ ವಾಸಕ್ಕೆ ಅತ್ಯಂತ ಸೂಕ್ತ ಎಂಬ ಹೆಗ್ಗಳಿಕೆ ಕೂಡ ಮಂಗಳೂರಿನದ್ದು!
ಒಟ್ಟಾರೆ ಗುಣಮಟ್ಟದ ಜೀವನ ಸೂಚ್ಯಂಕದಲ್ಲಿ ಜಗತ್ತಿನ 177 ರಾಷ್ಟ್ರಗಳ ಪೈಕಿ ಮಂಗಳೂರು 48ನೇ ಸ್ಥಾನ ಪಡೆದಿದ್ದು, ಸ್ಯಾನ್‌ಫ್ರಾನ್ಸಿಸ್ಕೊವನ್ನು(68) ಕೂಡ ಹಿಂದಿಕ್ಕಿದೆ. ಏಷ್ಯಾದ ಮಟ್ಟಿಗೆ ಟರ್ಕಿಯ ಬರ್ಸಾ ನಗರ ಮೊದಲ ಸ್ಥಾನ ಪಡೆದಿದ್ದು, ಮಂಗಳೂರು ಎರಡನೇ ಸ್ಥಾನದಲ್ಲಿದೆ. ಅಬುದಾಬಿ 5 ಮತ್ತು ದುಬೈ 9ನೇ ಸ್ಥಾನ ಪಡೆದಿವೆ.
ಇತ್ತೀಚೆಗೆ ಹೈದರಾಬಾದ್ ನಗರಕ್ಕೆ ದೇಶದ ಅತ್ಯುತ್ತಮ ಗುಣಮಟ್ಟದ ಜೀವನದ ನಗರ ಎಂಬ ಹೆಗ್ಗಳಿಕೆ ನೀಡಿದ್ದ ಮರ್ಸರ್ ಸಮೀಕ್ಷೆಗೆ ಸಂಪೂರ್ಣ ವ್ಯತಿರಿಕ್ತವಾದ ಚಿತ್ರಣವನ್ನು ನಂಬಿಯೊ ನೀಡಿದೆ ಎಂಬುದು ಕುತೂಹಲಕಾರಿ.
ಜೀವನ ಗುಣಮಟ್ಟ:
ಆಸ್ಪ್ರೇಲಿಯಾದ ಕ್ಯಾನ್‌ಬೆರಾ(222.99) ಅಂತಾರಾಷ್ಟ್ರೀಯ ರಾರಯಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಜೀವನ ಗುಣಮಟ್ಟದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ವೆನಿಜುವೆಲಾದ ಕ್ಯಾರಕಸ್(0.00) ನಗರ ಅತ್ಯಂತ ನಿಕೃಷ್ಟಗುಣಮಟ್ಟದ ಜೀವನದ ಕುಖ್ಯಾತಿಗೆ ಪಾತ್ರವಾಗಿದೆ. ಭಾರತದ ನಗರಗಳ ಪೈಕಿ ಮಂಗಳೂರು ಅತ್ಯುತ್ತಮ ಗುಣಮಟ್ಟದ ಜೀವನದ ನಗರವಾದರೆ, ಮುಂಬೈ ಅತ್ಯಂತ ಕನಿಷ್ಠ ಗುಣಮಟ್ಟದ ಜೀವನದ ನಗರ ಎಂದು ದಾಖಲಾಗಿದೆ.
ಕೊಳ್ಳುವ ಶಕ್ತಿ:
ಕೊಳ್ಳುವ ಶಕ್ತಿಯ ಸೂಚ್ಯಂಕದಲ್ಲಿ ಜಾಗತಿಕವಾಗಿ ಅಮೆರಿಕದ ಡಲ್ಲಾಸ್163.48 ಸೂಚ್ಯಂಕದೊಂದಿಗೆ ಮೊದಲ ಸ್ಥಾನ ಪಡೆದಿದ್ದರೆ, ವೆನಿಜುವೆಲಾದ ಕ್ಯಾರಕಸ್(2.99) ಕೊನೆಯ ಸ್ಥಾನದಲ್ಲಿದೆ. ದೇಶದ ಮಟ್ಟಿಗೆ ಗುರುಗ್ರಾಮ ಮೊದಲ ಸ್ಥಾನ, ಕೊಲ್ಕತಾ ಕೊನೆಯ ಸ್ಥಾನ ಪಡೆದಿದೆ. 177 ನಗರಗಳಲ್ಲಿ ಮಂಗಳೂರು 56ನೇ ಸ್ಥಾನ ಪಡೆದಿದ್ದು, ದೇಶದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಬೆಂಗಳೂರು ದೇಶದಲ್ಲಿ 4ನೇ ಸ್ಥಾನ ಪಡೆದಿದ್ದು, ಜಾಗತಿಕ ವಾಗಿ 75ನೇ ಸ್ಥಾನ ಪಡೆದುಕೊಂಡಿದೆ.
ಆರೋಗ್ಯ ಸೇವೆ:
ಜಾಗತಿಕವಾಗಿ ಬ್ರಿಟನ್‌ನ ಗ್ಲಾಸ್ಗೊ, 87.45 ಸೂಚ್ಯಂಕದೊಂದಿಗೆ ಆರೋಗ್ಯ ಸೇವೆಯಲ್ಲಿ ಮೊದಲ ಸ್ಥಾನ ಪಡೆದ ನಗರವಾಗಿದ್ದರೆ, ವೆನಿಜುವೆಲಾದ ಕ್ಯಾರಕಸ್(35.73) ಅತ್ಯಂತ ಕನಿಷ್ಠ ಆರೋಗ್ಯ ಸೇವೆಯ ನಗರವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ಅತ್ಯುತ್ತಮ ಆರೋಗ್ಯ ಸೇವೆ ಹೊಂದಿರುವ ನಗರವಾಗಿದ್ದರೆ, ಕೊಲ್ಕತಾ ಅತ್ಯಂತ ಕನಿಷ್ಠ ಆರೋಗ್ಯ ಸೌಲಭ್ಯ ಹೊಂದಿರುವ ನಗರ ಎಂದು ಹೇಳಲಾಗಿದೆ. ಬೆಂಗಳೂರು ಜಾಗತಿಕವಾಗಿ 85 ಹಾಗೂ ದೇಶದಲ್ಲಿ ಐದನೇ ಸ್ಥಾನ ಪಡೆದಿದೆ.
ಜೀವನ ವೆಚ್ಚ:
ಜಾಗತಿಕ ಮಟ್ಟದಲ್ಲಿ ಸಮೀಕ್ಷೆ ನಡೆಸಲಾದ ನಗರಗಳ ಪೈಕಿ ಮಂಗಳೂರು ಅತ್ಯಂತ ಕಡಿಮೆ ಜೀವನ ವೆಚ್ಚ ಸೂಚ್ಯಂಕದೊಂದಿಗೆ ಅಗ್ಗದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಸ್ವಿಜರ್‌ಲೆಂಡ್‌ನ ಜಿನೇವಾ (132.79) ಅಧಿಕ ಸೂಚ್ಯಂಕದೊಂದಿಗೆ ಜಗತ್ತಿನ ಅತಿ ದುಬಾರಿ ನಗರವಾಗಿದೆ. ಭಾರತದ ಮಟ್ಟಿಗೆ ಸಮೀಕ್ಷೆಯಾದ ನಗರಗಳ ಪೈಕಿ ಮಂಗಳೂರು ಅತಿ ಅಗ್ಗದ ನಗರ ಹಾಗೂ ಗುರುಗ್ರಾಮ ಅತಿ ದುಬಾರಿ ನಗರ. ವಿಶ್ವದಲ್ಲಿ ಬೆಂಗಳೂರು 9ನೇ ನಗರವಾಗಿದ್ದು, ದೇಶದಲ್ಲಿ 6ನೇ ಸ್ಥಾನ ಪಡೆದಿದೆ.
ಮಾಲಿನ್ಯ:
ಜಾಗತಿಕವಾಗಿ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ಅತ್ಯಂತ ಕನಿಷ್ಠ ಮಾಲಿನ್ಯ ಸೂಚ್ಯಂಕ (11.15)ದೊಂದಿಗೆ ಅತ್ಯಂತ ಆರೋಗ್ಯವಂತ ವಾತಾವರಣದ ನಗರ ಎಂದಾಗಿದ್ದರೆ, ಈಜಿಪ್ಟಿನ ಕೈರೋ 95.99 ಸೂಚ್ಯಂಕದೊಂದಿಗೆ ಹೆಚ್ಚು ಮಾಲಿನ್ಯಯುಕ್ತ ನಗರ ಎಂಬ ಕುಖ್ಯಾತಿ ಪಡೆದಿದೆ. ಅತಿ ಹೆಚ್ಚು ಮಲಿನ ನಗರಗಳ ಪೈಕಿ ನಮ್ಮ ದೆಹಲಿ 6ನೇ ಸ್ಥಾನದಲ್ಲಿದೆ ಎಂಬುದು ಆತಂಕದ ಸಂಗತಿ. ರಾಷ್ಟ್ರಮಟ್ಟದಲ್ಲಿ ಅತ್ಯಂತ ಕಡಿಮೆ ಮಾಲಿನ್ಯ ಮಟ್ಟಹೊಂದಿರುವ ಮಂಗಳೂರು, ಜಾಗತಿಕವಾಗಿಯೂ 11ನೇ ಸ್ಥಾನದಲ್ಲಿದೆ.
ಸಮೀಕ್ಷೆ ನಡೆಸಿದ್ದು ಹೇಗೆ? ಮಾನದಂಡಗಳು ಏನು?
ಈ ಸಮೀಕ್ಷೆಗಳನ್ನು ಬಹುತೇಕ ಗ್ರಾಹಕ ಸಂಬಂಧಿ ವೆಬ್‌ಸೈಟ್, ಸೂಪರ್ ಮಾರ್ಕೆಟ್, ಸರ್ಕಾರಿ ಸಂಸ್ಥೆಗಳು, ವರದಿಗಳು ಮುಂತಾದ ಮೂಲಗಳಿಂದ ಪಡೆದ ಮಾಹಿತಿ ಹಾಗೂ ನೇರ ಮಾಹಿತಿ ಸಂಗ್ರಹದ ಮೂಲಕ ಮಾಡಲಾಗಿದೆ. ಆಯಾ ನಗರಗಳ ವಾಸಿಗಳಿಂದ ಪಡೆದ ನೇರ ಮಾಹಿತಿಯನ್ನೂ ಬಳಸಲಾಗಿದೆ. ಅವುಗಳ ಆಧಾರದ ಮೇಲೆ ಅಲ್ಲಿನ ಜನರ ಜೀವನ ವೆಚ್ಚ, ಆರೋಗ್ಯ ಮಟ್ಟ, ಮಾಲಿನ್ಯ ಪ್ರಮಾಣ, ಕೊಳ್ಳುವ ಶಕ್ತಿ, ಸಂಚಾರ ದಟ್ಟಣೆ ಮುಂತಾದ ಸೂಚ್ಯಂಕಗಳನ್ನು ನಿರ್ಧರಿಸಲಾಗಿದೆ. ಹಾಗೆ ಮಾಡುವಾಗ, ಅಮೆರಿಕದ ನ್ಯೂಯಾರ್ಕ್ ನಗರವನ್ನು ಮೂಲ ಮಾನದಂಡವಾಗಿ ಪರಿಗಣಿಸಲಾಗಿದೆ. ಅಂದರೆ, ನ್ಯೂಯಾರ್ಕ್ ನಗರಕ್ಕೆ ಪ್ರತಿ ಮಾನದಂಡದ ಸೂಚ್ಯಂಕವೂ ಶೇ.100 ಆಗಿದೆ. ಅಂದರೆ, ಯಾವುದೇ ನಗರದ ಜೀವನ ವೆಚ್ಚ 120 ಆಗಿದ್ದರೆ, ಅದರರ್ಥ ಅದು ನ್ಯೂಯಾರ್ಕ್ ನಗರಕ್ಕಿಂತ ಶೇ.20ರಷ್ಟುದುಬಾರಿ ಎಂದರ್ಥ. ಒಂದು ನಗರದ ಜೀವನ ವೆಚ್ಚ 70 ಆಗಿದ್ದರೆ, ಅದರರ್ಥ ಆ ನಗರ ನ್ಯೂಯಾರ್ಕ್ಗಿಂತ ಶೇ.30ರಷ್ಟುಅಗ್ಗದ ಜೀವನ ವೆಚ್ಚದ ನಗರ.
ವರದಿ: ಕನ್ನಡ ಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.