
ಬೆಂಗಳೂರು(ಜೂ.22): ಬಜೆಟ್‌ನಲ್ಲಿ ಸಾಲ ಮನ್ನಾ ಮಾಡಿಯೇ ಬಿಡುತ್ತಾರೆ ಎಂಬ ನಿರೀಕ್ಷೆಯಿತ್ತು. ಮಾಡಲೇಬೇಕು ಎಂಬ ಒತ್ತ ಡವೂ ಇತ್ತು. ಆದರೆ, ಆಗ ಸಾಲ ಮನ್ನಾ ಮಾಡದೇ ಮುಂದೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಮಂಡಲದಲ್ಲಿ ಇಲಾಖಾವಾರು ಬೇಡಿಕೆಗಳ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಸಾಲ ಮನ್ನಾ ಮಾಡಿರುವುದು ಅಚ್ಚರಿಯಂತೆ ಕಾಣುತ್ತಿದೆ.
ಆದರೆ, ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್'ನ ನಿಲುವು, ಸಾಲ ಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿ ನಡೆಸಲು ಸಜ್ಜಾಗಿದ್ದ ಹೋರಾಟ ಮತ್ತು ಈ ಹಿಂದಿನ ಉದ್ದೇಶದಂತೆ ಡಿಸೆಂಬರ್'ನಲ್ಲಿ ಸಾಲ ಮನ್ನಾ ಮಾಡಿದರೆ, ರೈತರ ಹಿತಕ್ಕಿಂತ ಚುನಾವಣೆಯ ಲಾಭವೇ ಮುಖ್ಯವಾಗಿತ್ತು ಎಂದು ಬಿಂಬಿಸಲು ತಯಾರಾಗಿದ್ದ ಪ್ರತಿಪಕ್ಷಗಳ ಧೋರಣೆ ಹಿನ್ನೆಲೆಯಲ್ಲಿ ಸಾಲ ಮನ್ನಾ ಘೋಷಣೆಯನ್ನು ಶೀಘ್ರ ಮಾಡುವ ಅನಿವಾರ್ಯವೂ ಸಿದ್ದರಾಮಯ್ಯ ಅವರಿಗೆ ನಿರ್ಮಾಣವಾಗಿತ್ತು.
ಸಿದ್ದರಾಮಯ್ಯ ಅವರ ಆಪ್ತ ಮೂಲಗಳ ಸಾಲ ಮನ್ನಾ ಮಾಡಲು ಸೂಕ್ತ ಕಾಲ ಡಿಸೆಂಬರ್ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವಾಗಿತ್ತು. ಹೀಗಾಗಿಯೇ ಬಜೆಟ್ ಮಂಡನೆ ವೇಳೆ ಸಾಕಷ್ಟುಒತ್ತಡ ಬಂದರೂ ಅವರು ಸಾಲ ಮನ್ನಾ ಮಾಡಲು ಮುಂದಾಗಲಿಲ್ಲ. ಇದಕ್ಕೆ ಎರಡು ಕಾರಣಗಳನ್ನು ನೀಡ ಲಾಗುತ್ತದೆ.
1- ಬಜೆಟ್‌ನಲ್ಲಿ ಸಾಲ ಮನ್ನಾ ಮಾಡಿದರೆ ಸಿದ್ದರಾಮಯ್ಯ ಘೋಷಿಸಲು ಬಯಸಿದ್ದ ಮಾತೃ ಪೂರ್ಣ, ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಐದು ದಿನ ಹಾಲು, ಅನ್ನಭಾಗ್ಯ ಯೋಜನೆಯಲ್ಲಿ ಏಳು ಕೆ.ಜಿ. ಅಕ್ಕಿ ನೀಡುವಂತಹ ಜನಪರ ಯೋಜನೆಗಳನ್ನು ಘೋಷಿಸಲು ಸಂಪನ್ಮೂಲದ ಕೊರತೆ ಉಂಟಾಗುತ್ತದೆ. ಆಗ ಸಾಲ ಮನ್ನಾ ಮಾತ್ರ ಮಾಡಿ ಉಳಿದ ಯೋಜನೆಗಳನ್ನು ಕೈ ಬಿಡಬೇಕಾಗುತ್ತಿತ್ತು. ಹೀಗಾಗಿ ಸಾಲ ಮನ್ನಾಗೆ ಕಾಲ ಸೂಕ್ತವಲ್ಲ ಎಂದು ನಿರ್ಧರಿಸಿದರು.
2- ಚುನಾವಣೆ ಇನ್ನೂ ಒಂದು ವರ್ಷದ ನಂತರ ಬರಲಿದೆ. ಈಗಲೇ ಸಾಲಮನ್ನಾ ಮಾಡಿದರೆ ಚುನಾವಣೆ ವೇಳೆಗೆ ಈ ವಿಚಾರವೇ ಹಳತಾಗುತ್ತದೆ. ಹೀಗಾಗಿ ಚುನಾವಣೆಗೆ ಸಮೀಪವಿದ್ದಾಗ ಸಾಲ ಮನ್ನಾ ಮಾಡುವುದು ಸೂಕ್ತ ಎಂಬ ಭಾವನೆ.
ಹೀಗಾಗಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಸಾಲ ಮನ್ನಾ ಘೋಷಣೆ ಮಾಡಿರಲಿಲ್ಲ. ಆದರೆ, ರಾಷ್ಟ್ರ ರಾಜಕಾರಣದಲ್ಲಿ ನಡೆದ ಹಲವು ವಿದ್ಯಮಾನಗಳು ಸಿದ್ದರಾಮಯ್ಯ ಅವರ ಚಿಂತನೆಯನ್ನು ಬದಲಾಯಿಸುವಂತೆ ಮಾಡಿದವು. ಈ ಪೈಕಿ ಕಾಂಗ್ರೆಸ್ ಹೈಕಮಾಂಡ್ ಬಿಜೆಪಿ ಆಡಳಿತವಿದ್ದ ರಾಜ್ಯಗಳಲ್ಲಿ ಸಾಲ ಮನ್ನಾಗೆ ಆಗ್ರಹ ಮಾಡಿ ದೊಡ್ಡ ಹೋರಾಟಗಳನ್ನು ಸಂಘಟಿಸ ತೊಡಗಿತು. ಖುದ್ದು ರಾಹುಲ್ ಗಾಂಧಿ ಅವರು ಸಾಲ ಮನ್ನಾ ಹೋರಾಟದ ಮುಂಚೂಣಿಯಲ್ಲಿ ನಿಂತರು. ಇದು ಸಹಜವಾಗಿಯೇ ಸಿದ್ದರಾಮಯ್ಯ ಅವರ ಮೇಲೆ ಸಾಲ ಮನ್ನಾ ಬಗ್ಗೆ ಚಿಂತಿಸುವಂತೆ ಒತ್ತಡ ನಿರ್ಮಾಣ ಮಾಡಿತು. ಇದೇ ವೇಳೆ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸಾಲ ಮನ್ನಾ ಘೋಷಣೆಯಾಯಿತು. ಕಡೆಗೆ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಸರ್ಕಾರ ಸಹ ಸಾಲ ಮನ್ನಾ ಘೋಷಿಸಿತು. ರಾಜ್ಯದಲ್ಲಿ ಬಿಜೆಪಿ ಸಹ ಸಾಲ ಮನ್ನಾ ವಿಚಾರವಿಟ್ಟುಕೊಂಡು ಹೋರಾಟಕ್ಕೆ ಸಜ್ಜಾಯಿತು. ಇದೆಲ್ಲದರ ಫಲವಾಗಿ ಸಿದ್ದರಾಮಯ್ಯ ಸಾಲ ಮನ್ನಾ ಕುರಿತು ಭಾನುವಾರ ತೀರ್ಮಾನಿಸಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.