ದಗ ದಗ ಉರಿಯುತ್ತಿದೆ ಅಮೆಜಾನ್ ಕಾಡು!| ವಿಶ್ವದ ‘ಶ್ವಾಸಕೋಶ’ದಲ್ಲಿ ಕಾಡ್ಗಿಚ್ಚು -ವಿಶ್ವದ ನಾಯಕರ ಕಳವಳ| ಜಗತ್ತಿನ ಶೇ. 20 ರಷ್ಟುಆಮ್ಲಜನಕ ಇದೇ ಕಾಡಿನಲ್ಲಿ ಉತ್ಪತಿ
ಸಾವೋ ಪೌಲೋ[ಆ.24]: ವಿಶ್ವದ ಅತೀ ಹೆಚ್ಚು ಮಳೆ ಬೀಳುವ ಕಾಡು, ‘ವಿಶ್ವದ ಶ್ವಾಸಕೋಶ’ ಎಂದೆಲ್ಲಾ ಖ್ಯಾತಿ ಪಡೆದಿರುವ ಅಮೆಜಾನ್ ಅರಣ್ಯದಲ್ಲಿ ಬೆಂಕಿಯ ಕೆನ್ನಾಲಿಗೆಯ ತಾಂಡವ ನೃತ್ಯ 16ನೇ ದಿನಕ್ಕೆ ಕಾಲಿಟ್ಟಿದೆ. ಇಡೀ ಭೂಮಿಗೆ ಶೇ. 20ರಷ್ಟುಆಮ್ಲಜನಕ ಪೂರೈಸುವ ಈ ಕಾಡಿನ ಬೆಂಕಿ ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ಬಹುತೇಕ ಕಾಡು ಉರಿದು ಭಸ್ಮವಾಗುವ ಭೀತಿ ಎದುರಾಗಿದೆ. ಕಾಡ್ಗಿಚ್ಚಿಗೆ ವಿಶ್ವದ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರೆಜಿಲ್, ಪೆರು, ಕೊಲಂಬಿಯಾ, ಫ್ರಾನ್ಸ್, ವೆನಿಜುವೆಲಾ, ಗಯಾನಾ, ಬೊಲಿವಿಯಾ, ಈಕ್ವೇಡಾರ್ ಹಾಗೂ ಸುರಿನೇಮ್ ಮುಂತಾದ ದೇಶಗಳಲ್ಲಿ 550 ಮಿಲಿಯನ್ ಹೆಕ್ಟೇರ್ ವಿಸ್ತೀರ್ಣದಲ್ಲಿ ವಿಶಾಲವಾಗಿ ಹರವಿಕೊಂಡಿರುವ ಈ ಕಾಡಿನ ಬ್ರೆಜಿಲ್ ಭಾಗದಲ್ಲಿ ಈ ತಿಂಗಳ ಆರಂಭದಲ್ಲೇ ಬೆಂಕಿ ಕಾಣಿಸಿಕೊಂಡಿತ್ತು. ಇದು ವೇಗವಾಗಿ ಹಬ್ಬಿದ್ದು ಭಾರೀ ಪ್ರಮಾಣದಲ್ಲಿ ಬೆಂಕಿ ಆವರಿಸಿಕೊಂಡಿದೆ. ವಿಪರೀತ ಗಾಳಿಯಿಂದ ಬೆಂಕಿಯ ಅಬ್ಬರ ಜೋರಾಗಿದ್ದು, ಇಡೀ ಕಾಡಿನಾದ್ಯಂತ ದಟ್ಟಕಪ್ಪು ಹೊಗೆ ಆವರಿಸಿದೆ.
undefined
ಜಗತ್ತಿನ ಜೀವ ಸಂಕುಲಗಳ ಪೈಕಿ ಶೇ. 10 ರಷ್ಟುಇದೇ ಕಾಡಿನಲ್ಲಿದ್ದು, ಕಾಡ್ಗಿಚ್ಚಿನಿಂದಾಗಿ ಅಪರೂಪದ ಜೀವ ಸಂಕುಲ ಸುಟ್ಟು ಕರಕಲಾಗಿದೆ. ದಕ್ಷಿಣ ಅಮೆರಿಕದ ಅಂಟ್ಲಾಂಟಿಕ್ ತೀರ ಹಾಗೂ ಬ್ರೆಜಿಲ್‌ನ ಸಾವೋ ಪೌಲೋ ನಗರದಲ್ಲಿ ದಟ್ಟಹೊಗೆ ರಸ್ತೆ, ಮನೆಗಳನ್ನು ಮಬ್ಬಾಗಿಸಿವೆ. ಕಾಡ್ಗಿಚ್ಚಿನ ಭೀಕರತೆತೆಯನ್ನು ನಾಸಾ ಬಾಹ್ಯಾಕಾಶದಿಂದ ಸೆರೆ ಹಿಡಿದಿದ್ದು, ಕಾಡು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಹೊಗೆ ಕಂಡು ಬಂದಿದೆ.
ಈ ವರ್ಷ ಬ್ರೆಜಿಲ್‌ವೊಂದರಲ್ಲೇ 72,843 ಬೆಂಕಿ ಪ್ರಕರಣಗಳು ಕಂಡು ಬಂದಿದ್ದು, ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಕಾಡ್ಗಿಚ್ಚಿನ ಪ್ರಮಾಣದಲ್ಲಿ ಶೇ. 80 ರಷ್ಟುಹೆಚ್ಚಳವಾಗಿದೆ. ಬ್ರೆಜಿಲ್‌ನ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಇತರೆ ರಾಷ್ಟ್ರಗಳು ಆರೋಪಿಸಿವೆ. ಈ ಮಧ್ಯೆ ಈ ವಿಚಾರವನ್ನು ಅಂತಾರಾಷ್ಟ್ರೀಯ ಬಿಕ್ಕಟ್ಟು ಎಂದು ಘೋಷಣೆ ಮಾಡಲು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಮನವಿ ಮಾಡಿದ್ದು, ಜಿ-7 ಶೃಂಗ ಸಭೆಯಲ್ಲೇ ಇದನ್ನೇ ಮುಖ್ಯ ವಿಷಯವನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಮೆಜಾನ್‌ಗಾಗಿ ಪ್ರಾರ್ಥಿಸಿ ಅನ್ನುವ ಚಳುವಳಿಯೂ ನಡೆಯುತ್ತಿದೆ.