ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!| ಹಲವು ಶೆಲ್ ಕಂಪನಿಗಳನ್ನು ಕಾರ್ತಿ ಪುತ್ರಿಯ ಹೆಸರಿಗೆ ಬರೆಸಿರುವುದು ಬೆಳಕಿಗೆ| ವಿದೇಶದಲ್ಲಿ ಚಿದು 11 ಸ್ಥಿರಾಸ್ತಿ, 17 ಬ್ಯಾಂಕ್ ಖಾತೆ: ಸುಪ್ರೀಂಗೆ ಇ.ಡಿ. ಮಾಹಿತಿ
ನವದೆಹಲಿ[ಆ.24]: ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ತಾವು ಯಾವುದೇ ವಿದೇಶಿ ಬ್ಯಾಂಕ್ ಖಾತೆ ಹೊಂದಿಲ್ಲವೆಂದು ಪ್ರತಿಪಾದಿಸಿದ ಬೆನ್ನಲ್ಲೇ, ಅವರು ವಿದೇಶಗಳಲ್ಲಿ 11 ಸ್ಥಿರಾಸ್ತಿ ಹಾಗೂ 17 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂಬ ಸ್ಫೋಟಕ ವಿಚಾರವನ್ನು ಜಾರಿ ನಿರ್ದೇಶನಾಲಯ(ಇ.ಡಿ) ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿದೆ.
ಅಲ್ಲದೆ, ಈ ಅತಿದೊಡ್ಡ ಪಿತೂರಿಯನ್ನು ಬಯಲು ಮಾಡುವ ಸಲುವಾಗಿ ಚಿದು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲು ಅವಕಾಶ ಮಾಡಿಕೊಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿದೆ. ಆದಾಗ್ಯೂ, ಹಣ ಅವ್ಯವಹಾರ ಪ್ರಕರಣದಲ್ಲಿ ಆ.26ರವರೆಗೂ ಚಿದು ಅವರನ್ನು ಇ.ಡಿ ಬಂಧನ ಭೀತಿಯಿಂದ ಸುಪ್ರೀಂ ಪಾರು ಮಾಡಿದೆ.
ಅಲ್ಲದೆ, ವಿದೇಶಗಳಲ್ಲಿರುವ ಚಿದು ಅವರಿಗೆ ಸಂಬಂಧಿಸಿದ ಶೆಲ್(ಅಸ್ತಿತ್ವದಲ್ಲಿಲ್ಲದ) ಕಂಪನಿಗಳು ಯಾರ ಹೆಸರಿನಲ್ಲಿವೆ ಎಂಬುದನ್ನು ಪತ್ತೆಗೆ ಮುಂದಾದ ತನಿಖಾ ಸಂಸ್ಥೆಗಳಿಗೆ, ಚಿದಂಬರಂ ಅವರ ಮೊಮ್ಮಗಳ ಹೆಸರಿನಲ್ಲಿ ಈ ಎಲ್ಲಾ ಕಂಪನಿಗಳನ್ನು ವಿಲ್ ಮಾಡಲಾಗಿದೆ ಎಂಬ ಆಶ್ಚರ್ಯಕರ ಹಾಗೂ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದರು.
ಈ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದದಲ್ಲಿ ಇ.ಡಿ ಪರ ವಕಾಲತ್ತು ವಹಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಒಂದು ಖೊಟ್ಟಿಕಂಪನಿಯಿಂದ ಮತ್ತೊಂದು ಖೊಟ್ಟಿಕಂಪನಿ ನಡುವೆ ಭಾರೀ ಪ್ರಮಾಣದ ಹಣ ವರ್ಗಾವಣೆ ಹಾಗೂ ಚಿದಂಬರಂ ಅವರು ಶೆಲ್ ಕಂಪನಿಗಳ ಹೆಸರಿನಲ್ಲಿ ಭಾರತ ಹಾಗೂ ವಿದೇಶಗಳಲ್ಲಿ ಹಲವು ಆಸ್ತಿಗಳನ್ನು ಹೊಂದಿರುವ ಬಗ್ಗೆ ತನಿಖಾ ಸಂಸ್ಥೆ ಸಾಕ್ಷ್ಯಾಧಾರವಾಗಿ ಹಲವು ದಾಖಲೆಗಳನ್ನು ಸಂಗ್ರಹಿಸಿದೆ. ಅಲ್ಲದೆ, ಚಿದು ಶೆಲ್ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಈ ಬಗ್ಗೆ ಸತ್ಯ ಬಯಲಿಗೆ ಎಳೆಯಲು ಹೆಚ್ಚಿನ ವಿಚಾರಣೆಗಾಗಿ ಕಾಂಗ್ರೆಸ್ ನಾಯಕನ ಬಂಧನ ಅನಿವಾರ್ಯ ಎಂದು ಪ್ರತಿಪಾದಿಸಿದರು.