ಕೈದಿಗಳಿಗೆ ತಮ್ಮ ಆಹಾರ ತಾವೇ ಸಿದ್ಧಪಡಿಸಿಕೊಳ್ಳಲು ಅವಕಾಶ ಇಲ್ಲ| ತಿಹಾರ್ ಜೈಲಲ್ಲಿ ಕೈದಿಗಳ ಪ್ರತಿಭಟನೆಗೆ ಉಗ್ರ ಭಟ್ಕಳ್ ನಾಯಕತ್ವ!|
ನವದೆಹಲಿ[ಏ.27]: ಭಾರತದಲ್ಲಿ ನಡೆದ ವಿವಿಧ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಇಂಡಿಯನ್ ಮುಜಾಹಿದಿನ್ ಉಗ್ರ ಯಾಸೀನ್ ಭಟ್ಕಳ್ ಇದೀಗ ತಿಹಾರ್ ಜೈಲು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಹೆಚ್ಚಿನ ಭದ್ರತೆಯ ಸೆರೆಮನೆಯಲ್ಲಿ ಇರಿಸಿದಾಗಲೂ, ಇತರೆ ಕೈದಿಗಳ ಜತೆ ಸಂಪರ್ಕ ಸಾಧಿಸಿ, ಅವರ ಮನವೊಲಿಸಿ, ತನ್ನೊಂದಿಗೆ ಸೇರಿಸಿಕೊಂಡು 2 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದಾನೆ.
ಜೈಲಿನಲ್ಲಿ ಕೈದಿಗಳಿಗೆ ತಮ್ಮ ಆಹಾರ ತಾವೇ ಸಿದ್ಧಪಡಿಸಿಕೊಳ್ಳಲು ಅವಕಾಶ ಇಲ್ಲ. ಆದರೆ ಕಳೆದ ಡಿಸೆಂಬರ್‌ನಲ್ಲಿ ತಾಪಮಾನ ಭಾರೀ ಕುಸಿದಾಗ, ನೀರು ಮತ್ತು ಹಾಲು ಬಿಸಿ ಮಾಡಿಕೊಳ್ಳಲು ಜೈಲಧಿಕಾರಿಗಳ ಕೈದಿಗಳಿಗೆ ಇಂಡಕ್ಷನ್ ಕುಕ್ಕರ್ ನೀಡಿದ್ದರು. ಆದರೆ ಕೈದಿಗಳ ಕುಕ್ಕರ್ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದ ನಂತರ ಕುಕ್ಕರ್ ಹಿಂಪಡೆಯಲಾಗಿತ್ತು. ಇದರ ವಿರುದ್ಧ ಇತರೆ ಕೈದಿಗಳ ಜೊತೆ ಸೇರಿಕೊಂಡು ಭಟ್ಕಳ್ ಎರಡು ದಿನ ಪ್ರತಿಭಟನೆ ನಡೆಸಿದ್ದಾನೆ. ಈ ವಿಷಯ ಅರಿತ ಜೈಲಧಿಕಾರಿಗಳು, ಕೂಡಲೇ ಅವನ ಜತೆ ಸೇರಿದ್ದವರಿಗೆ ತಿಳಿವಳಿಕೆ ಹೇಳಿ ಅವನಿಂದ ದೂರ ಮಾಡಿದ ಮೇಲೆ ಪ್ರತಿಭಟನೆ ಹಿಂಪಡೆದಿದ್ದಾನೆ.
ದೆಹಲಿ ಗ್ಯಾಂಗ್‌ಸ್ಟರ್ ಹಾಗೂ ಪತ್ರಕರ್ತೆ ಸೌಮ್ಯ ಕೊಲೆಯಲ್ಲಿ ಭಾಗಿಯಾಗಿರುವ ರವಿ ಕಪೂರ್, ಮುಜಾಹಿದಿನ್‌ನ ಅಸಾದುಲ್ಲಾ ಹಡ್ಡಿ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆಯ ಆರೋಪಿ ಉತ್ತರ ದೆಹಲಿಯ ಕುಖ್ಯಾತ ಚೀನು ಗ್ಯಾಂಗ್ ಸದಸ್ಯರನ್ನು ಕಟ್ಟಿಕೊಂಡು ಯಾಸೀನ್ ಭಟ್ಕಳ್ ಪ್ರತಿಭಟನೆ ನಡೆಸಿದ್ದಾನೆ. ಒಟ್ಟಾರೆ ಹೆಚ್ಚಿನ ಭದ್ರತೆಯ ಜೈಲಿನಲ್ಲಿದ್ದಾಗಲೂ ಕುಖ್ಯಾತರನ್ನು ಒಂದುಗೂಡಿಸಿ ತನ್ನ ಕಾರ್ಯಸಾಧನೆಗೆ ಭಟ್ಕಳ್ ಮುಂದಾಗಿದ್ದಾನೆ. ಇದನ್ನು ಆರಂಭದಲ್ಲೇ ಚಿವುಟಿ ಹಾಕುವಲ್ಲಿ ಜೈಲು ಅಧಿಕಾರಿಗಳು ಯಶಸ್ವಿಯಾಗಿದ್ದು, ಇದೀಗ ತಿಹಾರ್ ಜೈಲಿನ ನಿಯಮಾವಳಿಗಳನ್ನು ಮತ್ತಷ್ಟುಕಠಿಣಗೊಳಿಸುವುದಾಗಿ ಹೆಸರು ಹೇಳಲಿಚ್ಛಿಸದ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.