ಚಳಿಗಾಲದಲ್ಲಿ ದೊಡ್ಡ ದಾಳಿ ನಡೆಸಲು ಉಗ್ರರ ಸಂಚು

By Kannadaprabha NewsFirst Published Nov 4, 2019, 7:13 AM IST
Highlights

 ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಹಾಗೂ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕರು, ಈ ಚಳಿಗಾಲದಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಭಾರತದ ಭದ್ರತಾ ಪಡೆಗಳಿಗೆ ಗುಪ್ತಚರ ಇಲಾಖೆಯು ಹೊಸ ಎಚ್ಚರಿಕೆ ಸಂದೇಶ ರವಾನಿಸಿದೆ. 

ನವದೆಹಲಿ (ನ.04): ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದರಿಂದ ಕೆರಳಿರುವ ಪಾಕಿಸ್ತಾನದ ಜೈಷ್‌ ಎ ಮೊಹಮ್ಮದ್‌ ಹಾಗೂ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕರು, ಈ ಚಳಿಗಾಲದಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಭಾರತದ ಭದ್ರತಾ ಪಡೆಗಳಿಗೆ ಗುಪ್ತಚರ ಇಲಾಖೆಯು ಹೊಸ ಎಚ್ಚರಿಕೆ ಸಂದೇಶ ರವಾನಿಸಿದೆ. ಕಾಶ್ಮೀರವು ಸಹಜ ಸ್ಥಿತಿಗೆ ಮರಳಬಾರದು ಎಂಬ ಉದ್ದೇಶದಿಂದ ಹಾಗೂ ನರೇಂದ್ರ ಮೋದಿ ಸರ್ಕಾರದ ಶಕ್ತಿ ಪರೀಕ್ಷಿಸುವ ಲೆಕ್ಕಾಚಾರದಿಂದ ದಾಳಿಗೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದೆ.

ಪಾಕಿಸ್ತಾನದ ಬಹಾವಲ್‌ಪುರದಲ್ಲಿ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಮುಖ್ಯ ಕಚೇರಿ ಇದೆ. ಅಲ್ಲಿ ಎಲ್ಲ ಭಯೋತ್ಪಾದಕರು ಈ ವಾರ ಸೇರಬೇಕು ಎಂದು ಜೈಷ್‌ ನಾಯಕತ್ವ ಸೂಚನೆ ನೀಡಿದೆ. ಇದು ದಾಳಿ ಸಂಚಿನ ಮುನ್ಸೂಚನೆ ಎಂದು ಗುಪ್ತಚರ ಮೂಲಗಳು ಹೇಳಿರುವುದಾಗಿ ಇಂಗ್ಲಿಷ್‌ ಪತ್ರಿಕೆಯೊಂದು ವರದಿ ಮಾಡಿದೆ.

ಇದೇ ಬಹಾವಲ್‌ಪುರದಲ್ಲಿ ಅನಾರೋಗ್ಯಪೀಡಿತ ಜೈಷ್‌ ಮುಖ್ಯಸ್ಥ ಮಸೂದ್‌ ಅಜರ್‌ ಹಾಗೂ ಜೈಷ್‌ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಆತನ ಸೋದರ ಅಬ್ದುಲ್‌ ಅಸ್ಗರ್‌ ಕೂಡ ಇದ್ದಾನೆ.

ಇನ್ನು ಲಭ್ಯವಾಗಿರುವ ಇತರ ಮಾಹಿತಿಗಳ ಪ್ರಕಾರ, ಲಷ್ಕರ್‌ ಎ ತೊಯ್ಬಾ ಕಮಾಂಡರ್‌ ಅಬು ಉಝೈಲ್‌ ಎಂಬಾತ, ‘ಭಾರತವು ಶೀಘ್ರದಲ್ಲೇ ಬಹುದೊಡ್ಡ ಆತ್ಮಾಹುತಿ ದಾಳಿ ಎದುರಿಸಲಿದೆ’ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಉಗ್ರರಿಗೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯ ಕಚೇರಿ ಕೂಡ ಬೆಂಬಲವಾಗಿ ನಿಂತಿದ್ದು, ಭಾರತದೊಳಗೆ ನುಸುಳಿ ಎಂದು ಜೈಷ್‌ ಉಗ್ರರಿಗೆ ಹಸಿರು ನಿಶಾನೆ ತೋರಿಸಿದೆ ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಈಗಾಗಲೇ ಭಾರತವು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ. ಇದರ ಪರಿಣಾಮ, ಕಳೆದ 3 ತಿಂಗಳಲ್ಲಿ ಸಿಯಾಲ್‌ಕೋಟ್‌ ವಲಯದಲ್ಲಿ ಜೈಷ್‌ನ ಯಾವುದೇ ಉಗ್ರರು ಒಳನುಸುಳಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

click me!