
ಹೈದರಾಬಾದ್[ಜು.24]: ಮುಖ್ಯಮಂತ್ರಿಗಳಾದವರು ತಮ್ಮ ತವರಿಗೆ ಭೇಟಿ ನೀಡಿದ ಖುಷಿಯಲ್ಲಿ ಆಸ್ಪತ್ರೆ ಅಥವಾ ಶಾಲೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡುವುದು, ಸರ್ವಾಂಗೀಣ ಅಭಿವೃದ್ಧಿ ಮಾಡುವುದಾಗಿ ಹೇಳುವುದು ಸರ್ವೇಸಾಮಾನ್ಯ. ಆದರೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ವಿಭಿನ್ನ ಘೋಷಣೆ ಮಾಡಿ ಗಮನಸೆಳೆದಿದ್ದಾರೆ. ಸಿದ್ದಿಪೇಟ್ ಜಿಲ್ಲೆಯಲ್ಲಿರುವ ತಮ್ಮ ತವರು ಚಿಂತಮಡಕ ಗ್ರಾಮಕ್ಕೆ ಸೋಮವಾರ ತೆರಳಿದ್ದ ಅವರು, ಆ ಹಳ್ಳಿಯಲ್ಲಿರುವ ಎಲ್ಲ 2 ಸಾವಿರ ಕುಟುಂಬಗಳಿಗೆ ತಲಾ 10 ಲಕ್ಷ ರು. ನೀಡುವುದಾಗಿ ಘೋಷಿಸಿದ್ದಾರೆ.
ಇದಕ್ಕಾಗಿ ಸರ್ಕಾರದ ಬೊಕ್ಕಸದಿಂದ 200 ಕೋಟಿ ರು. ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ. ಈ ಹಣ ಬಳಸಿ ಹಳ್ಳಿಯ ಜನರು ಟ್ರಾಕ್ಟರ್, ವ್ಯಾನ್, ಹಸು ಖರೀದಿಸಬಹುದು. ಕೋಳಿ ಫಾಮ್‌ರ್ ಕೂಡ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಇದಲ್ಲದೆ ಗ್ರಾಮಸ್ಥರಿಗೆ 1500ರಿಂದ 2000 ಮನೆಗಳನ್ನು ಕಟ್ಟಿಸಿಕೊಡುತ್ತೇನೆ ಎಂದೂ ತಿಳಿಸಿದ್ದಾರೆ. ಈ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ.
ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದರೆ 1 ಲಕ್ಷ ರು.ವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಕೆಸಿಆರ್ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸದೇ ಒಂದೇ ಹಳ್ಳಿಗೆ 200 ಕೋಟಿ ರು. ಬಿಡುಗಡೆ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ರೈತ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ.
ಒಂದೇ ಗ್ರಾಮಕ್ಕೆ 200 ಕೋಟಿ ರು. ಖರ್ಚು ಮಾಡುವುದು ಮೂರ್ಖತನದ ಆಲೋಚನೆ. ಕೆಸಿಆರ್ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಯೋ ಅಥವಾ ಅವರ ತವರು ಗ್ರಾಮ ಚಿಂತಮಡಕಕ್ಕೆ ಮಾತ್ರವೋ. ಒಂದೆಡೆ ಇಡೀ ರಾಜ್ಯ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದರೆ, ಮುಖ್ಯಮಂತ್ರಿಗಳು ಒಂದೇ ಗ್ರಾಮಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅದೇ ಸೌಲಭ್ಯವನ್ನು ಇಡೀ ರಾಜ್ಯಕ್ಕೇಕೆ ವಿಸ್ತರಿಸಬಾರದು ಎಂದು ಕಾಂಗ್ರೆಸ್ ವಕ್ತಾರ ಡಾ| ಶ್ರವಣ್ ದಾಸೋಜು ತಿಳಿಸಿದ್ದಾರೆ. ಬಿಜೆಪಿ ಕೂಡ ಆಕ್ಷೇಪ ತೆಗೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.