ಇನ್ನುಮುಂದೆ ಕನ್ನಡದಲ್ಲಿಯೂ ನಡೆಯುತ್ತೆ ಟಿಸಿಇಟಿ ಪರೀಕ್ಷೆ

First Published Jun 19, 2018, 9:19 AM IST
Highlights

ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಸಿಇಟಿ) ಈ ಮುಂಚಿನಂತೆ ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ಮುಂದು ವರಿಸುವಂತೆ ಈ ಪರೀಕ್ಷೆಗಳನ್ನು ಹಮ್ಮಿಕೊಳ್ಳುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದೆ. 

ನವದೆಹಲಿ: ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಸಿಇಟಿ) ಈ ಮುಂಚಿನಂತೆ ಕನ್ನಡ ಸೇರಿದಂತೆ 20 ಭಾಷೆಗಳಲ್ಲಿ ಮುಂದು ವರಿಸುವಂತೆ ಈ ಪರೀಕ್ಷೆಗಳನ್ನು ಹಮ್ಮಿಕೊಳ್ಳುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದೆ. 

ಟಿಸಿಇಟಿಯಿಂದ ಕನ್ನಡ ಸೇರಿದಂತೆ 17 ಭಾಷಾ ಮಾಧ್ಯಮಗಳನ್ನು ತೆಗೆದು ಹಾಕಿ ಕೇವಲ 3 ಭಾಷೆಗಳಲ್ಲಿ ಪರೀಕ್ಷೆ ನಡೆಸಲು ಸಿಬಿಎಸ್‌ಇ ಇತ್ತೀಚೆಗೆ ನಿರ್ಧಾರ ಕೈಗೊಂಡಿತ್ತು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಕೇಂದ್ರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು, ಈ ಎಲ್ಲ ಭಾಷೆಗಳಲ್ಲಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದಾಗಿ ಸೋಮವಾರ ತಿಳಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಜಾವಡೇಕರ್,  ಟಿಸಿಇಟಿ ಪರೀಕ್ಷೆಗಳನ್ನು ಎಲ್ಲ ಭಾರತೀಯ ಭಾಷೆಗಳಲ್ಲಿ ಈ ಮೊದಲಿನಂತೆ ನಡೆಸಲಾಗುತ್ತದೆ. ನಾನು ಈ ಬಗ್ಗೆ ಈಗಾಗಲೇ ಸಿಬಿಎಸ್‌ಇಗೆ ಸೂಚನೆ ನಿಡಿದ್ದೇನೆ. ಎಲ್ಲ 20 ಭಾಷೆಗಳಲ್ಲಿ ಪರೀಕ್ಷೆ  ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಪ್ರಕಾರ ಇಂಗ್ಲಿಷ್, ಹಿಂದಿ, ಬಾಂಗ್ಲಾ, ಅಸ್ಸಾಮಿ, ಗಾರೋ, ಗುಜರಾತಿ, ಕನ್ನಡ, ಖಾಸಿ, ಮಲಯಾಳಂ, ಮಣಿಪುರಿ, ಮರಾಠಿ, ಮಿಜೋ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು, ಟಿಬೆಟನ್ ಮತ್ತು ಉರ್ದು ಭಾಷೆಗಳಲ್ಲಿ ಸಿಬಿಎಸ್‌ಇ ಪರೀಕ್ಷೆ ನಡೆಸಲಿದೆ ಎಂದೂ ಜಾವಡೇಕರ್ ವಿವರಿಸಿದ್ದಾರೆ. 

ಕನ್ನಡ, ತಮಿಳು ಸೇರಿದಂತೆ 17 ಭಾಷಾ ಮಾಧ್ಯಮಗಳಲ್ಲಿ ಪರೀಕ್ಷೆ ನಡೆಸುವುದಕ್ಕೆ ತಿಲಾಂಜಲಿ ನೀಡುವ ಸಿಬಿಎಸ್‌ಇ ನಿರ್ಧಾರವನ್ನು ಡಿಎಂಕೆ ಸಂಸದೆ ಕನಿಮೋಳಿ ಸೋಮವಾರ ಬೆಳಗ್ಗೆ ತೀವ್ರವಾಗಿ ವಿರೋಧಿಸಿದ್ದರು. ಇದು ಒಕ್ಕೂಟ ವ್ಯವಸ್ಥೆಗೆ ಹಾಗೂ ಆಯಾ ರಾಜ್ಯಗಳ ಮಾತೃಭಾಷೆಗಳಿಗೆ ಮಾಡುವ ಅನ್ಯಾಯ ಎಂದು ಕಿಡಿಕಾರಿದ್ದರು. ಮಕ್ಕಳಿಗೆ ಹಿಂದಿ ಮತ್ತು ಸಂಸ್ಕೃತವನ್ನು ಹೇರಲಾಗುತ್ತಿದೆ. ಇದು ದೇಶದಲ್ಲಿ ಇನ್ನೊಂದು ಭಾಷಾ ಹೋರಾಟಕ್ಕೆ ನಾಂದಿ ಹಾಡೀತು. ಹಿಂದಿ-ಹಿಂದು-ಹಿಂದುಸ್ತಾನ ನಿರ್ಮಾಣದತ್ತ ಬಿಜೆಪಿಯ ಇನ್ನೊಂದು ಕ್ರಮವಿದು  ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

click me!