ಹಲೋ ಮಿನಿಸ್ಟರ್ : ಹಲವು ಪ್ರಶ್ನೆಗಳಿಗೆ ಸಚಿವರ ಉತ್ತರ

By Suvarna Web DeskFirst Published Jul 16, 2017, 10:34 PM IST
Highlights

ಕನ್ನಡಪರ ಹೋರಾಟಗಾರ, ಮಾಜಿ ಶಾಸಕ, ದಿವಂಗತ ಜಿ.ನಾರಾಯಣ್‌ಕುಮಾರ್ ಅವರು ಬೆಂಗಳೂರಿನ ಅರಳೆಪೇಟೆಯಲ್ಲಿ ಸ್ಥಾಪಿಸಿದ್ದ ಕನ್ನಡ ಶಾಲೆಯ ಕೊಠಡಿಯೊಂದನ್ನು ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಿ ಅತಿಕ್ರಮ ಪ್ರವೇಶಕ್ಕೆ ಪ್ರಯತ್ನಿಸಿರುವುದು ಖಂಡನೀಯ. ದುಷ್ಕೃತ್ಯ ಎಸಗಿರುವ ವ್ಯಕ್ತಿ ಜನಪ್ರತಿನಿಧಿಯಾಗಿರಲಿ, ಗೂಂಡಾ ಆಗಿರಲಿ ಯಾರು ಮಾಡಿದರೂ ಅದು ತಪ್ಪೆ. ಈ ವಿಚಾರದಲ್ಲಿ ನಾನು ವೈಯಕ್ತಿಕವಾಗಿ ಶಾಲೆಯ ಕಾರ್ಯದರ್ಶಿ ಗುರುದೇವ್ ನಾರಾಯಣ್‌ಕುಮಾರ್ ಅವರಿಗೆ ಸಹಕಾರ ನೀಡಿ ಶಾಲೆಯನ್ನು ಕಾಪಾಡುತ್ತೇನೆ.

ಬೆಂಗಳೂರು(ಜು.16): ಈ ತಿಂಗಳಾಂತ್ಯಕ್ಕೆ 10 ಸಾವಿರ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಕಟಿಸಿ, ಆಗಸ್ಟ್ ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಭಾನುವಾರ ‘ಸುವರ್ಣ ಸುದ್ಧಿವಾಹಿನಿ’ಯ ‘ಹಲೋ ಮಿನಿಸ್ಟರ್’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು, ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 1203 ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದ ಶಾಲೆಗಳಲ್ಲಿ 6 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಾಗಾಗಿ ಒಟ್ಟಾರೆ 10 ಸಾವಿರ ಶಿಕ್ಷಕರ ನೇಮಕಾತಿ ಪೈಕಿ 5400 ಹುದ್ದೆಗಳನ್ನು ಆ ಭಾಗದ ಖಾಲಿ ಸ್ಥಾನಗಳ ಭರ್ತಿಗೆ ಆದ್ಯತೆ ನೀಡಲಾಗುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ತಲಾ 4 ಸಾವಿರ ಶಿಕ್ಷಕರಂತೆ ಇನ್ನೂ 8 ಸಾವಿರ ಶಿಕ್ಷರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಶಿಕ್ಷಕರ ನೇಮಕಾತಿ ನಿಯಮಾವಳಿಗಳಲ್ಲಿ ಯಾವುದೇ ಗೊಂದಲ ಇಲ್ಲ. ಅರ್ಹ ವಿದ್ಯಾರ್ಹತೆ ಜತೆಗೆ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯಲ್ಲಿ ಪಾಸಾಗಿರುವವರಿಗೆ ಮಾತ್ರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲಾಗುವುದು. ಸಿಇಟಿಯಲ್ಲಿ ಪಾಸಾದವರನ್ನು ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಹತ್ತಾರು ವರ್ಷದಿಂದ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ನೇಮಕಾತಿ ಮಾಡಿಲ್ಲ ಎಂದು ಶಿಕ್ಷಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಶಾಲೆಗಳ ಲೆಕ್ಕದಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಸಾಧ್ಯವಿಲ್ಲ. 250 ಮಕ್ಕಳಿರುವ ಶಾಲೆಗೆ ದೈಹಿಕ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕೆಂಬ ನಿಯಮಾವಳಿ ಇದೆ. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ವಿಭಾಗಗಳಿಗೆ ಒಂದು ಸ್ಪಷ್ಟ ನಿಲುವು ತೆಗೆದುಕೊಂಡು ದೈಹಿಕ ಶಿಕ್ಷಕರ ನೇಮಕ ಹೇಗೆ ಮಾಡಬೇಕೆಂದು ಕೆಲವು ದಿನಗಳಲ್ಲಿ ಪ್ರಕಟ ಮಾಡಲಾಗುವುದು. 2011ರ ನಂತರ ಚಿತ್ರಕಲೆ, ಸಂಗೀತ ಹಾಗೂ ದೈಹಿಕ ಶಿಕ್ಷಕರ ನೇಮಕಾತಿ ಆಗಿಲ್ಲ. ಈಗ ಈ ಶಿಕ್ಷಕರ ಅವಶ್ಯಕತೆ ಎಷ್ಟಿದೆ ಎಂದು ಪರಿಶೀಲನೆ ನಡೆಯುತ್ತಿದೆ ಎಂದರು.

ಶೀಘ್ರ ಪಿಯು ಉಪನ್ಯಾಸಕರ ನೇಮಕ

ಪಿಯು ಉಪನ್ಯಾಸಕರ ನೇಮಕ ವಿಚಾರ ಕಳೆದ ಎರಡು ವರ್ಷದಿಂದ ನೆನಗುದಿಗೆ ಬಿದ್ದಿರುವ ಬಗ್ಗೆ ನವೀನ್ ಮರಿಗೌಡರ್ ಎಂಬುವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಉಪನ್ಯಾಸಕರ ನೇಮಕ ಸಂಬಂಧ ಈಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಅರ್ಜಿಗಳನ್ನು ಪರಿಶೀಲಿಸಿ ಸಿಇಟಿ ಪರೀಕ್ಷೆ ನಡೆಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಒಟ್ಟು 1203 ಉಪನ್ಯಾಸ ಹುದ್ದೆಗಳಿಗೆ ಶೀಘ್ರ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.

ಮಾನವೀಯತೆ ಮೇಲೆ ವರ್ಗ

ವರ್ಗಾವಣೆಯಲ್ಲಿ ವಿಧವೆಯರಿಗೆ ಮೀಸಲಾತಿ ನೀಡುವಂತೆ ಕೇಳಿದ ಶಿಕ್ಷಕಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವ ತನ್ವೀರ್ ಸೇಠ್,ವಿಧವೆಯರಲ್ಲದವರೂ ಸುಳ್ಳು ಪ್ರಮಾಣ ಪತ್ರ ನೀಡಿ ವರ್ಗಾವಣೆ ಪಡೆದಿದ್ದ 9 ಪ್ರಕರಣಗಳು ನಡೆದಿದ್ದರಿಂದ ಮೀಸಲಾತಿ ಕೈಬಿಡಲಾಗಿದೆ. ಆದರೆ, ಮಾನವೀಯತೆ ಆಧಾರದ ಮೇಲೆ ಒಬ್ಬ ತಾಯಿ ಒಂದು ಮಗು ಇರುವ ಪ್ರಕರಣಗಳಲ್ಲಿ ವರ್ಗಾವಣೆಗೆ ಪರಿಗಣಿಸಲಾಗುತ್ತಿದೆ. 10 ವರ್ಷ ಒಂದೇ ಕಡೆ ಕೆಲಸ ಮಾಡಿದವರನ್ನು ರೊಟೇಷನ್‌ನಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡಲು ಹೊಸ ನಿಯಮ ಸೇರಿಸಲಾಗಿದೆ. ಸರ್ವ ಶಿಕ್ಷಣ ಅಭಿಯಾನದಡಿ ನೇಮಕವಾಗಿರುವ ಶಿಕ್ಷಕರಿಗೂ ವರ್ಗಾವಣೆಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.

ಖಾಸಗಿ ಶಾಲೆಗಳು ಕನಿಷ್ಠ ವೇತನ ನೀಡ್ತಿಲ್ಲ:

ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್ ಆದೇಶದಂತೆ ಕನಿಷ್ಠ ವೇತನ ನೀಡುತ್ತಿಲ್ಲ. ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡು ಮಾಸಿಕ ಒಂದೆರಡು ಸಾವಿರ ರು. ವೇತನ ಕೈಗೆ ನೀಡುತ್ತಿವೆ. ನ್ಯಾಯಸಮ್ಮತ ವೇತನ ದೊರೆಯುವಂತೆ ಮಾಡಿ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ಕೆಲ ಲೋಪದೋಷಗಳೂ ಇವೆ. ಅವುಗಳನ್ನು ಸರಿಪಡಿಸಲು ಮುಂದಾಗಿದ್ದೇವೆೆ. ಈಗಾಗಲೇ ಶಿಕ್ಷಕರ ವೇತನದ ಆಧಾರದ ಮೇಲೆಯೇ ಶುಲ್ಕ ನಿಗದಿ ನಿಯಮ ಮಾಡಿದ್ದೇವೆ. ಮುಂದೆ ಇನ್ನಷ್ಟು ನಿಯಮಗಳ ಮೂಲಕ ನಿಮ್ಮ ನೋವಿಗೆ ಪರಿಹಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಶಾಲಾ ಮಾತೆಯರಿಗೆ ವೇತನ ಹೆಚ್ಚಳ ಪರಿಶೀಲನೆ

ಡಿಎಡ್, ಬಿಎಡ್ ವ್ಯಾಸಂಗ ಮಾಡಿರುವ ಶಾಲಾ ಮಾತೆಯರಿಗೆ ಅತಿಥಿ ಶಿಕ್ಷಕರಾಗಿ ಉನ್ನತೀಕರಿಸಿ ವೇತನ ಹೆಚ್ಚಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಶಾಲೆಗಳಿಗೆ ಅಗತ್ಯ ಕಾರ್ಯಕ್ರಮ ರೂಪಿಸಲು, ವಿಶೇಷ ಸೌಕರ್ಯ ಒದಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಶಾಲೆಗಳ ಹಳೇ ವಿದ್ಯಾರ್ಥಿಗಳ ಸಂಘ ಕಟ್ಟಿ ಶಾಲೆಯ ಅಭಿವೃದ್ಧಿಗೆ ಸಹಕಾರ ಪಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಸಚಿವರು ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.

ಇಲಾಖೆ ಸುಧಾರಣೆಗೆ ಕ್ರಮ

ಇಲಾಖೆಯಲ್ಲಿ ಕೈಗೊಂಡ ಸುಧಾರಣ ಕ್ರಮಗಳನ್ನು ತಿಳಿಸಿದ ಸಚಿವ ತನ್ವೀರ್ ಸೇಠ್, ಶನಿವಾರವಷ್ಟೇ 141 ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬಿಇಓ ತಮ್ಮದೇ ಜಿಲ್ಲೆ, ತಾಲ್ಲೂಕಿನವರಾಗಬಾರದು ಎಂಬ ನಿಯಮ ಮಾಡಲಾಗಿದೆ. ಡಿಡಿಪಿಐ ಹುದ್ದೆಗಳಿಗೂ ಇದೇ ನಿಯಮ ಮಾಡಲಾಗಿದೆ. 806 ಪ್ರಾಂಶುಪಾಲರ ಹುದ್ದೆ ಖಾಲಿ ಇದೆ. 176 ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ಆ ಸ್ಥಾನಗಳಿಗೆ ನಿಯೋಜನೆ ಮಾಡಿದ್ದೇವೆ. ಇನ್ನೂ ನೂರಾರು ಹುದ್ದೆಗಳಿಗೆ ಕೆಪಿಎಸ್‌ಸಿ ಮೂಲಕ ನೇರ ನೇಮಕಾತಿಗೆ ಅವಕಾಶ ಮಾಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲಾ ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಲು ‘ಶಿಕ್ಷಣ ಕಿರಣ’ ಎಂಬ ಕಾರ್ಯಕ್ರಮ ರೂಪಿಸಿ ಮಕ್ಕಳ ಆಧಾರ್ ಸಂಖ್ಯೆ ಲಿಂಕ್ ಮಾಡಲಾಗಿದೆ. ಆ ಮೂಲಕ ಅವರ ದಾಖಲಾತಿ, ಹಾಜರಾತಿ ಮೇಲೆ ಇಲಾಖೆ ಕಣ್ಣಿಟ್ಟಿದೆ. ಶಿಕ್ಷಕರ ಹಾಜರಾತಿಗೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಗುರುಚೇತನ ಯೋಜನೆ ಮೂಲಕ ೫೦ ಸಾವಿರ ಶಿಕ್ಷಕರಿಗೆ ತರಬೇತಿ ನೀಡಲು ಉದ್ದೇಶಿಸಿದ್ದು, ಇದಕ್ಕೆ ಮುಂದಿನ ಶಿಕ್ಷಕರ ದಿನಾಚರಣೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ಸರ್ವ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಯಶೋಧಾ ಬೋಪಣ್ಣ, ಪ್ರೌಢಶಿಕ್ಷಣ ನಿರ್ದೇಶಕಿ ಫಿಲೋಮಿನಾ ಲೋಬೋ ಕೂಡ ಹಾಜರಿದ್ದರು.

click me!