ಕಾವೇರಿ ನದಿಗೆ ಮತ್ತೊಂದು ಅಣೆಕಟ್ಟು : ತಮಿಳುನಾಡು ವಿರೋಧ

By Web DeskFirst Published 12, Sep 2018, 12:18 PM IST
Highlights

ಮೇಕದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಆದರೆ ಈ ಬಗ್ಗೆ ವಿರೋಧ ವ್ಯಕ್ತಪಡಿಸುವ ತನ್ನ ನಿರ್ಧಾರದ ಬಗ್ಗೆ ತಮಿಳುನಾಡು ಸರ್ಕಾರ ಅಚಲವಾಗಿದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ. 

ಸೇಲಂ: ಕಾವೇರಿ ನದಿಗೆ ಮೇಕೆದಾಟು ಬಳಿ ಜಲಾಶಯ ನಿರ್ಮಿಸುವ ಕರ್ನಾಟಕದ ಪ್ರಸ್ತಾಪವನ್ನು ವಿರೋಧಿಸುವ ತನ್ನ ನಿರ್ಧಾರದಲ್ಲಿ ತಮಿಳುನಾಡು ಸರ್ಕಾರ ಅಚಲ ವಾಗಿದೆ. ಈ ವಿಷಯದಲ್ಲಿ ನಾವು ಕಾನೂನು ಹೋರಾಟಕ್ಕೆ ಸಿದ್ಧ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹೇಳಿದ್ದಾರೆ. 

ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ. ಮೇಕೆದಾಟು ಜಲಾಶಯ ನಿರ್ಮಿಸಬಾರದು ಎಂಬುದು ನಮ್ಮ ನಿಲುವು. ತಮಿಳುನಾಡಿನಲ್ಲಿ ಬರಗಾಲವಿದ್ದಾಗ, ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿದ್ದರೂ ಕುಡಿಯುವ ನೀರು ಬಿಡುಗಡೆಗೂ ಕರ್ನಾಟಕ ನಿರಾಕರಿಸಿತ್ತು ಎಂದು ಪಳನಿಸ್ವಾಮಿ ತಿಳಿಸಿದ್ದಾರೆ. 

ಇನ್ನೊಂದು ಅಣೆಕಟ್ಟು ನಿರ್ಮಾ ಣವಾದರೆ, ಅದು ತಮಿಳುನಾಡಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಹೇಳಿದ್ದಾರೆ. ಮೇಕೆದಾಟು ಅಣೆಕಟ್ಟು ವಿವಾದ ಇತ್ಯರ್ಥಕ್ಕೆ ಸಭೆ ಆಯೋಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಳನಿಸ್ವಾಮಿ, ಈ ವಿಷಯದಲ್ಲಿ ತಮ್ಮ ಸರ್ಕಾರದ ನಿಲುವು ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ.

ಮೇಕೆದಾಟು ಅಣೆಕಟ್ಟು ನಿರ್ಮಾಣದ ಕಾರ್ಯಸಾಧ್ಯತೆ ವರದಿಗೆ ಅನುಮೋದನೆ ನೀಡುವಂತೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಕೇಂದ್ರ ಜಲ ಆಯೋಗಕ್ಕೆ ವಿನಂತಿಸಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪಳನಿಸ್ವಾಮಿ ಪತ್ರ ಬರೆದಿದ್ದರು.

Last Updated 19, Sep 2018, 9:23 AM IST