
ಚೆನ್ನೈ[ಅ.20]: ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು ಗೋವಿನ ಶಸ್ತ್ರ ಚಿಕಿತ್ಸೆ ನಡೆಸಿದ್ದಾಋಎ. ಸತತ 5 ಗಂಟೆಗಳ ಈ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಗೋವಿನ ಹೊಟ್ಟೆಯಿಂದ ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ.
ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿಕೊಂಡಿದ್ದ ಕಾರಣದಿಂದ ನೋವು ಅನುಭವಿಸುತ್ತಿದ್ದ ಈ ಮೂಕ ಪ್ರಾಣಿ ಕಳೆದ ಹಲವಾರು ದಿನಗಳಿಂದ ಹೊಟ್ಟೆಗೆ ಹೊಡೆದುಕೊಳ್ಳುತ್ತಿತ್ತು ಎಂದು ವರದಿಯೊಂದು ಉಲ್ಲೇಖಿಸಿದೆ. ಇಷ್ಟೇ ಅಲ್ಲದೇ ಈ ಗೋವು ನೀಡುತ್ತಿದ್ದ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು. ಅಕ್ಟೋಬರ್ 18ರಂದು 11 ಗಂಟೆಗೆ ಆರಂಭವಾದ ಆಪರೇಷನ್, ಸಂಜೆ 04.30ಕ್ಕೆ ಮುಗಿದಿದೆ. ಅಂದರೆ ಒಟ್ಟು 5 ಗಂಟೆ 30 ನಿಮಿಷಗಳ ಕಾಲ ಈ ಶಸ್ತ್ರ ಚಿಕಿತ್ಸೆ ನಡೆದಿದೆ.
ಸೂಜಿಗಳೂ ಪತ್ತೆ
ಡಾ. ಎ. ವೇಲವನ್ ಈ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಹಲವಾರು ಪೋಸ್ಟ್ ಗ್ರ್ಯಾಜುಯೇಟ್ಸ್ ವಿದ್ಯಾರ್ಥಿಗಳು ಅವರಿಗೆ ಸಹಾಯ ಮಾಡಿದ್ದಾರೆ. ಈ ಕುರಿತಾಗಿ ಮಾಹಿತಿ ನೀಡಿರುವ ಡಾ. ಎ. ವೇಲವನ್ 'ಗೋವಿನ ಹೊಟ್ಟೆಯೊಳಗೆ ಹಲವಾರು ಸೂಜಿಗಳೂ ಪತ್ತೆಯಾಗಿವೆ. ಹೇದಯದ ಬಳಿ ಕೂಡಾ ಸೂಜಿಗಳು ಪತ್ತೆಯಾಗಿವೆ. ಇದೊಂದು ಕಷ್ಟಕರ ಶಸ್ತ್ರಚಿಕಿತ್ಸೆಯಾಗಿತ್ತು. ಒಂದು ವೇಳೆ ಈ ಸೂಜಿಗಳಲ್ಲಿ ಒಂದಾದರೂ ಗೋವಿನ ಹೃದಯಕ್ಕೆ ತಾಗಿದ್ದರೆ ಇದಕ್ಕೂ ಮೊದಲೇ ಅದು ಸತ್ತು ಹೋಗುತ್ತಿತ್ತು' ಎಂದಿದ್ದಾರೆ.
35 ಸಾವಿರ ವೆಚ್ಚದ ಶಸ್ತ್ರಚಿಕಿತ್ಸೆ ಕೇವಲ 140 ರೂಪಾಯಿಗೆ
ಗೋವಿನ ಮಾಲೀಕ ಮುನಿರತ್ನಂ ಈ ಸಂಬಂಧ ಪ್ರತಿಕ್ರಿಯಿಸಿದ್ದು, 'ಆಪರೇಷನ್ ಗೆ ಒಟ್ಟು 140 ರೂ. ತಗುಲಿದೆ. ಆದರೆ ಯಾವುದಾದರೂ ಖಾಸಗಿ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆದಿದ್ದರೆ, 35 ರಿಂದ 40 ಸಾವಿರ ರೂಪಾಯಿ ವೆಚ್ಚವಾಗುತ್ತಿತ್ತು. ಗೋವು ಮೊದಲಿನಂತಾಗಲು ಇನ್ನೂ ಒಂದು ವಾರವಾಗುತ್ತದೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.