
ಬೆಂಗಳೂರು : ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಂಗಳಲ್ಲಿ ಒಂದು ವಾರ ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಬೇಕು ಮತ್ತು ಮೂಲಭೂತ ಸೌಕರ್ಯಗಳ ಕುರಿತು ಪರಾಮರ್ಶಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನಿರ್ದೇಶನ ನೀಡಿದ್ದಾರೆ.
ಕಳೆದ ಜು.30 ಮತ್ತು 31ರಂದು ನಡೆದ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಕುರಿತು ವಿಜಯಭಾಸ್ಕರ್ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ತಾಲೂಕುಗಳಲ್ಲಿ ಒಂದು ಸಮೀಕ್ಷಾ ಸಭೆ ಮತ್ತು ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸಬೇಕು. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓಗಳು ತಾಲೂಕುಗಳಿಗೆ ತಿಂಗಳಲ್ಲಿ ಒಂದು ವಾರ ಪ್ರವಾಸ ಕೈಗೊಳ್ಳಬೇಕು ಮತ್ತು ಒಂದು ದಿನ ಹೋಬಳಿ ವಾಸ್ತವ್ಯ ಮಾಡಬೇಕು ಎಂದು ಸೂಚಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಜಿಲ್ಲಾ ಮಟ್ಟದ ಒಂದು ಸಮನ್ವಯ ಸಮಿತಿಯನ್ನು ರಚಿಸಿ ಸಭೆಗಳನ್ನು ನಡೆಸಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ವಸತಿ ಶಾಲೆಗಳಿಗೆ ತಿಂಗಳಿಗೆ ಒಂದು ದಿನ ಆಕಸ್ಮಿಕ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಕುರಿತು ಪರಾಮರ್ಶಿಸಬೇಕು. ಬಂಡವಾಳ ಹೂಡಿಕೆದಾರರಿಗೆ ಬೇಕಾಗುವ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು. ಶಾಲಾ-ಕಾಲೇಜುಗಳ ಕಟ್ಟಡ ಮತ್ತು ಶಿಕ್ಷಕರ ಕೊರತೆ ಕುರಿತು ಪರಾಮರ್ಶಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳು ಬೇಗ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ವಸತಿ ಯೋಜನೆಗಳಿಗೆ ಬೇಕಾಗುವ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಎರಡು ತಿಂಗಳಲ್ಲಿ ಎಷ್ಟುಜಮೀನು ಬೇಕು ಎಂಬ ವರದಿಯನ್ನು ವಸತಿ ಇಲಾಖೆಯ ಕಾರ್ಯದರ್ಶಿಗೆ ನೀಡಬೇಕು ಎಂದು ಹೇಳಿದ್ದಾರೆ.
ವಸತಿ ಶಾಲೆ, ಆಸ್ಪತ್ರೆ ಇತ್ಯಾದಿಗಳಿಗೆ ಜಮೀನು ಒದಗಿಸುವುದಕ್ಕಾಗಿ ಆ.31ರೊಳಗೆ ಜಾಗ ಗುರುತಿಸಬೇಕು. ಮಳೆ ಅನಾಹುತದಿಂದ ಹಾನಿಗೀಡಾದ ಬಾಕಿ ಮನೆಗಳಿಗೆ ತುರ್ತಾಗಿ ಪರಿಹಾರ ನೀಡಬೇಕು. ರಸ್ತೆ, ರೈಲ್ವೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಸ್ವಾಧೀನ ತ್ವರಿತಗೊಳಿಸಬೇಕು. ಸರ್ಕಾರಿ ಶಾಲೆಗಳ ಪ್ರದೇಶದಲ್ಲಿ ಎರಡು ಮತ್ತು ಹೆಚ್ಚಿನ ಮಹಡಿಯ ಹಾಸ್ಟೆಲ್‌ಗಳನ್ನು ನಿರ್ಮಿಸಲು ನಿವೇಶನ ಒದಗಿಸಬೇಕು. ಕಚೇರಿಯಲ್ಲಿ ಅತಿ ಅಗತ್ಯ ಇರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಕಳುಹಿಸಬೇಕು. ಪ್ರಾದೇಶಿಕ ಆಯುಕ್ತರು ಮಾಸಿಕ ಸಮೀಕ್ಷಾ ಸಭೆಗಳನ್ನು ನಡೆಸಬೇಕು. ಒತ್ತುವರಿ ತೆರವುಗೊಳಿಸಿದ ಜಮೀನುಗಳಿಗೆ ಬೇಲಿ ಹಾಕುವುದು, ಎಸ್‌ಡಿಆರ್‌ಎಫ್‌ರಡಿ ಕಾಲುಸಂಕಗಳ ರಿಪೇರಿಯನ್ನು ಕೈಗೆತ್ತಿಕೊಳ್ಳುವುದು, ಘನತ್ಯಾಜ ಘಟಕಗಳಿಗೆ ನಗರ/ ಪಟ್ಟಣಗಳ ಸುತ್ತಮುತ್ತ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳುವುದು ತ್ವರಿತವಾಗಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.