
ಕಾಬೂಲ್(ಜೂನ್ 25): ರಂಜಾನ್ ಸಂಭ್ರಮದ ನಡುವೆಯೂ ಉಗ್ರಗಾಮಿಗಳು ರಕ್ತಪಾತ ಮುಂದುವರಿಸಿದ್ದಾರೆ. ಭಾರತ ಮತ್ತು ಆಫ್ಘಾನಿಸ್ತಾನ ದೇಶಗಳ ಸ್ನೇಹದ ಹೆಗ್ಗುರುತಾಗಿದ್ದ ಸಲ್ಮಾ ಅಣೆಕಟ್ಟನ್ನು ತಾಲಿಬಾನ್ ಉಗ್ರಗಾಮಿಗಳು ಹೊಡೆದುರುಳಿಸಿದ್ದಾರೆ. ಹೆರಾತ್ ಪ್ರಾಂತ್ಯದ ಚಿಸ್ತಿ ಷರೀಫ್ ಜಿಲ್ಲೆಯಲ್ಲಿ ನಡೆದ ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ. ಆಫ್ಘಾನಿಸ್ತಾನದ ಭದ್ರತಾ ಪಡೆಗಳ ಪ್ರತಿದಾಳಿಗೆ ನಾಲ್ವರು ಉಗ್ರರು ಹತರಾಗಿದ್ದಾರೆನ್ನಲಾಗಿದೆ.
'ಹಾರಿ' ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ಬಳಿಯ ಚೆಕ್'ಪೋಸ್ಟ್'ಗೆ ತಾಲಿಬಾನ್ ಉಗ್ರರು ಆಕ್ರಮಣ ನಡೆಸಿದ್ದಾರೆ. ಅಲ್ಲಿದ್ದ ಭದ್ರತಾ ಪಡೆಗಳ ಎಲ್ಲಾ ಆಯುಧಗಳನ್ನು ವಶಕ್ಕೆ ತೆಗೆದುಕೊಂಡ ಬಳಿಕ ಅಣೆಕಟ್ಟಿನ ಮೇಲೆ ಉಗ್ರರು ದಾಳಿ ನಡೆಸಿದರೆನ್ನಲಾಗಿದೆ.
ಉಗ್ರರ ದಾಳಿಗೆ ನಾಶವಾದ ಸಲ್ಮಾ ಅಣೆಕಟ್ಟನ್ನು ಭಾರತವೇ ನಿರ್ಮಿಸಿಕೊಟ್ಟಿತ್ತು. 2016ರ ಜೂನ್'ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಈ ಅಣೆಕಟ್ಟಿನ ಉದ್ಘಾಟನೆ ನೆರವೇರಿಸಿದ್ದರು. 1,700 ಕೋಟಿ ರೂ ವೆಚ್ಚದ ಈ ಅಣೆಕಟ್ಟಿನಿಂದ ಜಲವಿದ್ಯುತ್ ಯೋಜನೆ ಹಾಗೂ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗಿತ್ತು. 42 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಹಾಗೂ 75 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲು ಈ ಅಣೆಕಟ್ಟು ಸಹಾಯವಾಗಿತ್ತು.
ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಸ್ನೇಹ-ಸಂಬಂಧದ ಗುರುತಾಗಿದ್ದ ಸಲ್ಮಾ ಅಣೆಕಟ್ಟನ್ನು ತಾಲಿಬಾನ್ ಉದ್ದೇಶಪೂರ್ವಕವಾಗಿಯೇ ಟಾರ್ಗೆಟ್ ಮಾಡಿತೇ? ಇನ್ನಷ್ಟು ಮಾಹಿತಿ ಸಿಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.