
ಬರ್ನ್(ಜೂ.17): ಕಪ್ಪು ಹಣ ಸಂಗ್ರಹಿಸಿಡಲು ವಿಶ್ವದಲ್ಲೇ ಅತ್ಯಂತ ಸುರಕ್ಷಿತ ತಾಣ ಎನಿಸಿಕೊಂಡಿರುವ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀ ಯರು ಬಚ್ಚಿಡುತ್ತಿದ್ದ ಕಾಳಧನದ ಕುರಿತು ಮಾಹಿತಿ ಪಡೆಯಲು ಶತಪ್ರಯತ್ನ ನಡೆಸುತ್ತಿದ್ದ ಭಾರತಕ್ಕೆ ಪ್ರಮುಖ ಯಶಸ್ಸು ದೊರೆತಿದೆ.
ಭಾರತೀಯರು ಸ್ವಿಸ್ ಬ್ಯಾಂಕು ಗಳಲ್ಲಿ ಇಡುವ ಹಣ ಕಾಳಧನ ಎಂಬ ಶಂಕೆ ಮೂಡಿದ ಕೂಡಲೇ ತನ್ನಿಂತಾನೇ ಮಾಹಿತಿ ವಿನಿಮಯ ಮಾಡುವ ವ್ಯವಸ್ಥೆಗೆ ಸ್ವಿಜರ್ಲೆಂಡ್ ಶುಕ್ರವಾರ ಅನುಮೋದನೆ ನೀಡಿದೆ.
ತೆರಿಗೆ ಸಂಬಂಧಿ ವಿಚಾರಗಳಲ್ಲಿ ಸ್ವಯಂಚಾಲಿತವಾಗಿ ಮಾಹಿತಿ ವಿನಿಮಯಕ್ಕೆ ರೂಪಿಸಲಾಗಿರುವ ಜಾಗತಿಕ ಒಪ್ಪಂದ ಕುರಿತಾದ ವರದಿಯನ್ನು ಸ್ವಿಸ್ ಫೆಡರಲ್ ಕೌನ್ಸಿಲ್ ಅಂಗೀಕರಿಸಿದೆ.
ಈ ವ್ಯವಸ್ಥೆಯನ್ನು 2018ರಿಂದ ಜಾರಿಗೆ ತರಲಾಗುತ್ತದೆ. 2019ರ ವೇಳೆಗೆ ಭಾರತಕ್ಕೆ ಮೊದಲ ಕಂತಿನಲ್ಲಿ ಮಾಹಿತಿ ಲಭ್ಯವಾಗಲಿದ್ದು, ಕಪ್ಪು ಕುಳಗಳಿಗೆ ಅಕ್ರಮ ಹಣವನ್ನು ಸಂಗ್ರಹಿಸಿಡುವುದು ಇನ್ನು ಕಷ್ಟವಾಗಲಿದೆ.
ಭಾರತೀಯರ ಕಪ್ಪು ಹಣಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯ ನಿರ್ದಿಷ್ಟವಾಗಿ ಎಂದಿನಿಂದ ಆರಂಭವಾಗಲಿದೆ ಎಂಬುದನ್ನು ಸ್ವಿಸ್ ಫೆಡರಲ್ ಕೌನ್ಸಿಲ್ ಶೀಘ್ರದಲ್ಲೇ ಭಾರತಕ್ಕೆ ತಿಳಿಸಲಿದೆ.
ಶುಕ್ರವಾರ ಅಂಗೀಕಾರವಾಗಿ ರುವುದು ಕರಡು ಅಧಿಸೂಚನೆ ಯಾಗಿದೆ. ಈ ವಿಚಾರದಲ್ಲಿ ಜನ ಮತಗಣನೆ ಅಗತ್ಯವಿಲ್ಲ. ಹೀಗಾಗಿ ಅದರ ಅನುಷ್ಠಾನದಲ್ಲಿ ವಿಳಂಬವಾಗುವ ಸಾಧ್ಯತೆ ಇಲ್ಲ.
ಭಾರತೀಯರು ಸ್ವಿಸ್ ಬ್ಯಾಂಕು ಗಳಲ್ಲಿ ಇಟ್ಟಿರುವ ಕಪ್ಪು ಹಣದ ಮಾಹಿತಿಯನ್ನು ಪಡೆಯಲು ಭಾರತ ಹಾಗೂ ಸ್ವಿಜರ್ಲೆಂಡ್ ನಡುವೆ ಸಾಕಷ್ಟುಮಾತುಕತೆಗಳು ನಡೆದಿದ್ದವು. ಈ ಕುರಿತು ಒಪ್ಪಂದ ಕೂಡ ಏರ್ಪಟ್ಟಿತ್ತು. ಈ ಒಪ್ಪಂದ ಇನ್ನು ಮುಂದೆ ಭಾರತೀಯರು ಇಡಲಿರುವ ಕಾಳಧನಕ್ಕೆ ಮಾತ್ರ ಕಡಿವಾಣ ಹಾಕಲಿದೆ.
ಅಂದರೆ ಇದುವರೆಗೆ ಯಾರಾದರೂ ಸ್ವಿಜರ್ಲೆಂಡ್‌ನ ಬ್ಯಾಂಕ್‌ಗಳಲ್ಲಿ ಹಣ ಇಟ್ಟಿದ್ದರೆ ಅದರ ಮಾಹಿತಿ ಭಾರತಕ್ಕೆ ರವಾನೆಯಾಗುವುದಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.