
ಕಲಬುರಗಿ(ಮಾ.13): ಆತ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರಸಿದ್ದ ಸ್ವಾಮೀಜಿ. ಆಳಂದ ತಾಲೂಕಿನ ಮಠವೊಂದರ ಆಡಳಿತ ಉಸ್ತುವಾರಿ ಹೊತ್ತಿದ್ದ. ಆದ್ರೆ, ಲೌಕಿಕ ಜೀವನದಿಂದ ದೂರವಿರಲು ಸಾಧ್ಯವಾಗದೆ ಮದುವೆಯಾಗಿ ಸಂಸಾರ ಕೂಡ ನಡೆಸಿದ್ದ. ಇದೀಗ ಆಕೆಗೆ ಕೈ ಕೊಟ್ಟಿದ್ದಾನೆ. ಹಾಗಾದರೆ, ಆತ ಏನಾದ? ಆ ಮಹಿಳೆ ಮಾಡಿದ್ದಾದರೂ ಏನು ಎನ್ನುವುದರ ವಿವರ ಇಲ್ಲಿದೆ.
ಪ್ರಕಾಶ್ ಪುರಾಣಿಕ್, ಆಳಂದ ತಾಲೂಕಿನ ಸರಸಂಬಾ ಗ್ರಾಮದ ಮಲ್ಲಯ್ಯ ಮತ್ಯಾ ನಿರಗುಡಿ ಮಠದ ಆಡಳಿತ ಉಸ್ತುವಾರಿ ಆಗಿದ್ದ. ನಿತ್ಯ ಮಠಕ್ಕೆ ಬರುತ್ತಿದ್ದ ದಲಿತ ಮಹಿಳೆಯಾದ ಮಹಾನಂದ ಮೇಲೆ ಕಣ್ಣು ಹಾಕಿದ್ದಾನೆ. ಸ್ನೇಹ ಪ್ರೀತಿಯಾಗಿ ಮದುವೆ ಕೂಡ ಆಗಿದೆ. ಮಠದಲ್ಲಿಯೇ 3 ವರ್ಷ ಸಂಸಾರ ಮಾಡಿದ್ದಾನೆ. ಆಮೇಲೆ ಕಲಬುರಗಿಯ ಓಂನಗರ ಬಡಾವಣೆಯಲ್ಲಿ ಮನೆ ಖರೀದಿಸಿ ಮಹಾನಂದಳನ್ನ ಕರೆತಂದಿದ್ದಾನೆ. ಈಕೆ ಗರ್ಭಿಣಿಯಾದ ಮೇಲೆ ಪುಸಲಾಯಿಸಿ ಎರಡು ಬಾರಿ ಅಬಾರ್ಷನ್ ಮಾಡಿಸಿ ಕಡೆಗೆ ದೂರವಿಟ್ಟಿದ್ದಾನೆ. ಕಡೆಗೆ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನ ದೋಚಿ ಎಸ್ಕೇಪ್ ಆಗಿದ್ದ.
ತನ್ನ ಜೀವನದಲ್ಲಿ ಚೆಲ್ಲಾಟವಾಡಿ ದಿಢೀರ್ ಅಂತ ಮನೆ ಬಿಟ್ಟು ಹೋದ ಖತರ್ನಾಕ್ ಸ್ವಾಮೀಜಿ ವಿರುದ್ಧ ಮಹಾನಂದ ಕಲಬುರಗಿಯ ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆಗೆ ಕಂಪ್ಲೇಂಟ್ ನೀಡಿದ್ದಾಳೆ. ಈಕೆಯ ಹೋರಾಟಕ್ಕೆ ಕಲಬುರಗಿಯ ಅನೇಕ ದಲಿತ ಸಂಘಟನೆಗಳು ಕೂಡ ಸಾಥ್ ನೀಡಿವೆ.
ಸ್ವಾಮಿಜಿಯಾಗಲು ಪತ್ನಿಯನ್ನೇ ದೂರ ಮಾಡಲು ಸಜ್ಜಾಗಿದ್ದ ವಂಚಕ ಇದೀಗ ಕಂಬಿ ಎಣಿಸುವಂತಾಗಿದೆ. ಒಟ್ಟಿನಲ್ಲಿ ಮಠದ ಭಕ್ತೆಯನ್ನು ಪ್ರೀತಿಸಿ ಮದುವೆಯಾಗಿ, ಸಂಸಾರ ನಡೆಸಿ ಇದೀಗ ದಲಿತ ಎನ್ನುವ ಕಾರಣಕ್ಕೆ ಬಿಟ್ಟು ಹೋಗಿರುವುದು ದುರಂತವೇ ಸರಿ. ಪ್ರಕಾಶ್ ಪುರಾಣಿಕ್ ಘನ ಕಾರ್ಯದಿಂದ ಮಠಮಾನ್ಯಗಳು ತಲೆತಗ್ಗಿಸುವಂತಾಗಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.