ಲಕ್ನೋ ದಾಳಿ: ಭಾರತದಲ್ಲಿ ಇದು ಇಸ್ಲಾಮಿಕ್ ಸ್ಟೇಟ್'ನ ಮೊದಲ ಹೆಜ್ಜೆ ಗುರುತಾ?

By Suvarna Web DeskFirst Published Mar 8, 2017, 11:51 AM IST
Highlights

ಟ್ರೈನು ಸ್ಫೋಟ ಹಾಗೂ ಉಗ್ರನ ಎನ್'ಕೌಂಟರ್ ಘಟನೆಗಳು ಉತ್ತರಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ರಾಜ್ಯಾದ್ಯಂತ ಪೊಲೀಸರು ಹೈಅಲರ್ಟ್ ಘೋಷಿಸಿದ್ದಾರೆ.

ಲಕ್ನೋ(ಮಾ. 08): ಇಸ್ಲಾಮಿಕ್ ಸ್ಟೇಟ್'ನ ಮಾದರಿಯಲ್ಲಿ ದಾಳಿ ನಡೆಸಿರುವ ಉಗ್ರಗಾಮಿಯೊಬ್ಬನನ್ನು ಎಟಿಎಸ್ ಪಡೆ ಸಂಹಾರ ಮಾಡಿದೆ. ಇಲ್ಲಿಯ ಕಾಕೋರಿ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ 13 ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ 23 ವರ್ಷದ ಸೈಫೀವುಲ್ಲಾ ಅಲಿಯಾಸ್ ಸೈಫುಲ್ ಎಂಬಾತ ಹತನಾಗಿದ್ದಾನೆ. ಈತನ ಬಳಿ ಭಾರೀ ಪ್ರಮಾಣದ ಮದ್ದುಗುಂಡು, ಶಸ್ತ್ರಾಸ್ತ್ರಗಳಿದ್ದವು. ಇಸ್ಲಾಮಿಕ್ ಸ್ಟೇಟ್'ನ ಧ್ವಜ ಹಾಗೂ ಸಂಘಟನೆಗೆ ಸೇರಿದ ಸಾಹಿತ್ಯ ಮೊದಲಾದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹತನಾದ ಉಗ್ರ ಐಸಿಸ್'ನಿಂದ ನೇರವಾಗಿ ನಿಯುಕ್ತಿಗೊಂಡು ಈ ಕೃತ್ಯ ಎಸಗಿದನೇ? ಅಥವಾ ಇಸ್ಲಾಮಿಕ್ ಸ್ಟೇಟ್'ನ ಸ್ಫೂರ್ತಿಯಲ್ಲೇ ಈತನೇ ಸ್ವಯಂಕೃತವಾಗಿ ಮಾಡಿದನೇ? ಎಂಬುದು ಇನ್ನೂ ದೃಢಪಟ್ಟಿಲ್ಲ.

ಮ.ಪ್ರ. ರೈಲು ಸ್ಫೋಟಕ್ಕೆ ಲಿಂಕ್?
ನಿನ್ನೆ ಮಧ್ಯಪ್ರದೇಶದಲ್ಲಿ ಟ್ರೈನೊಂದರ ಮೇಲೆ ಲಘು ಬಾಂಬ್ ಸ್ಫೋಟಗೊಂಡು ಎಂಟು ಮಂದಿ ಬಲಿತೆಗೆದ ಘಟನೆಯ ಹಿಂದೆ ಇದೇ ಸಫೀವುಲ್ಲಾ ಇದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಬಾಂಬ್ ಸ್ಫೋಟದಲ್ಲಿ ಈತನೇ ಮಾಸ್ಟರ್'ಮೈಂಡ್ ಎಂಬುದೂ ಪೊಲೀಸರ ಶಂಕೆಯಾಗಿದೆ.

ಐಸಿಸ್ ನಂಟು?
ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಉತ್ತರಪ್ರದೇಶದಲ್ಲಿ ತನ್ನ ನೆಟ್ವರ್ಕ್ ಬೆಳೆಸಿದ್ದು, ಸಫೀವುಲ್ಲಾ ಎನ್'ಕೌಂಟರ್ ಆದ ಮನೆಯಿಂದಲೇ ಈ ಜಾಲವನ್ನು ನಿರ್ವಹಿಸಲಾಗುತ್ತಿತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇರಾಕ್ ಮತ್ತು ಸಿರಿಯಾ ದೇಶಗಳಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಭಾರತದಲ್ಲಿ ಬೇರು ಬಿಡುತ್ತಿರುವುದು ನಿಜಕ್ಕೂ ಅಪಾಯದ ಕರೆಗಂಟೆಯಾಗಿದೆ.

ಟ್ರೈನು ಸ್ಫೋಟ ಹಾಗೂ ಉಗ್ರನ ಎನ್'ಕೌಂಟರ್ ಘಟನೆಗಳು ಉತ್ತರಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ರಾಜ್ಯಾದ್ಯಂತ ಪೊಲೀಸರು ಹೈಅಲರ್ಟ್ ಘೋಷಿಸಿದ್ದಾರೆ.

click me!