
ಭೋಪಾಲ್: ಬಾಲ್ಯದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿ 2015ರಲ್ಲಿ ಭಾರತಕ್ಕೆ ಮರಳಿದ್ದ ಅನಾಥ ಯುವತಿ ಗೀತಾ ಶೀಘ್ರದಲ್ಲಿಯೇ ವಿವಾಹವಾಗಲಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಲಹೆಯಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇಢ ಕನ್ಯಾದಾನ ನೆರವೇರಿಸಲಿದ್ದಾರೆ.
ಗೀತಾರನ್ನು ಭಾರತಕ್ಕೆ ಕರೆತರುವಲ್ಲಿ ಸುಷ್ಮಾ ಸ್ವರಾಜ್ ಮುಖ್ಯಭೂಮಿಕೆ ನಿಭಾಯಿಸಿದ್ದರು. ಈಗ ಗೀತಾಳಿಗೆ 25 ವರ್ಷ ತುಂಬಿದ್ದು, ಸೂಕ್ತ ವರನನ್ನು ಹುಡುಕಲಾಗುವುದು ಎಂದು ಹೇಳಿದ್ದಾರೆ. ವಿಧಿಶಾದ ಲೋಕಸಭಾ ಸಂಸದರಾಗಿರುವ ಸುಷ್ಮಾ ಸ್ವರಾಜ್, ಭೋಪಾಲ್'ಗೆ ಬಂದಾಗೆಲ್ಲಾ ಗೀತಾರನ್ನು ಭೇಟಿ ಮಾಡುತ್ತಿದ್ದರು. ಬುಧವಾರದಂದು ಭೋಪಾಲ್'ನಲ್ಲಿರುವ ತಮ್ಮ ಬಂಗಲೆಯಲ್ಲಿ ಗೀತಾರನ್ನು ಭೇಟಿ ಮಾಡಿದ್ದ ಸುಷ್ಮಾ ಸ್ವರಾಜ್ ಮದುವೆ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
ಯಾರು ಈ ಗೀತಾ?
ಪಾಕಿಸ್ತಾನದಲ್ಲಿ 14 ವರ್ಷ ಅಜ್ಞಾತವಾಸ ಅಥವಾ ವನವಾಸ ಅನುಭವಿಸಿದ ಮೂಕ ಹುಡುಗಿ ಈಕೆ. ಸಲ್ಮಾನ್ ಅಭಿನಯದ ಭಜರಂಗಿ ಭಾಯ್'ಜಾನ್ ಸಿನಿಮಾ ನೀವು ನೋಡಿರಬಹುದು. ಅದರಲ್ಲಿ ಪಾಕಿಸ್ತಾನದಿಂದ ತಾಯಿಯ ಜೊತೆ ಭಾರತಕ್ಕೆ ದಾರಿ ತಪ್ಪಿದ ಬಾಲಕಿಯನ್ನು ಭಾರತೀಯ ವ್ಯಕ್ತಿ ಪಾಕಿಸ್ತಾನಕ್ಕೆ ಮರಳಿಸುವ ಕಥೆ ಇದೆ. ಅಂಥದ್ದೇ ಕಥೆ ಈ ಗೀತಾಳದ್ದು. ಭಾರತ-ಪಾಕಿಸ್ತಾನಕ್ಕೆ ಸಂಪರ್ಕ ಸಾಧಿಸುವ ಸಮ್'ಝೋತಾ ಎಕ್ಸ್'ಪ್ರೆಸ್ ರೈಲು ಹತ್ತಿ ಈಕೆ ಪಾಕಿಸ್ತಾನದಲ್ಲಿಳಿದು ದಾರಿ ಗೊತ್ತಾಗದೇ ಅಲ್ಲೇ ಕಳೆದುಹೋಗುತ್ತಾಳೆ. ಆಗ ಈಕೆಗೆ 11 ವರ್ಷ. ಮಾತು ಬಾರದ ಈಕೆಯನ್ನು ಪಾಕಿಸ್ತಾನದ ಎನ್'ಜಿಒಗಳು ರಕ್ಷಿಸುತ್ತವೆ. ತನ್ನ ಭಾರತೀಯ ವಿಳಾಸ ಈಕೆಗೆ ಗೊತ್ತಿಲ್ಲದೇ ಇದ್ದರಿಂದ ಭಾರತಕ್ಕೆ ಮರಳಿಸುವ ಕೆಲಸ ಸಫಲವಾಗುವುದಿಲ್ಲ. ಪಾಕಿಸ್ತಾನದಲ್ಲೇ ಉಳಿಯುವುದು ಈಕೆಗೆ ಅನಿವಾರ್ಯವಾಗುತ್ತದೆ.
ಅಂದಹಾಗೆ ಈಕೆಯ ನಿಜವಾದ ಹೆಸರು ಗೀತಾ ಅಲ್ಲ. ಅದು ಯಾರಿಗೂ ಗೊತ್ತೂ ಇಲ್ಲ. ಈಕೆ ಹಿಂದೂ ದೇವರುಗಳನ್ನ ಬಹಳವಾಗಿ ಪೂಜೆ ಮಾಡುತ್ತಿದ್ದರಿಂದ ಸಾಂಕೇತಿಕವಾಗಿ ಗೀತಾ ಎಂದು ನಾಮಕರಣ ಮಾಡಲಾಯಿತು. ಕೆಲವರು ಈಕೆಯನ್ನು ಗುಡ್ಡೀ ಎಂದೂ ಕರೆಯುತ್ತಿದ್ದರು. ಪರಮ ಹಿಂದೂ ಧರ್ಮಸ್ಥೆಯಾದ ಈಕೆ ಪಾಕಿಸ್ತಾನದಲ್ಲಿ ಮುಸ್ಲಿಮರ ಹಬ್ಬಗಳನ್ನೂ ಆಚರಿಸುತ್ತಿದ್ದಳು.
ಕಾಕತಾಳೀಯವೆಂಬಂತೆ, ಇಂಥದ್ದೇ ಕಥೆ ಇರುವ ಭಜರಂಗಿ ಭಾಯ್'ಜಾನ್ ಸಿನಿಮಾ ಬಿಡುಗಡೆಯಾದ ಬಳಿಕ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಬರ್ನೀ ಅವರು ಗೀತಾಳನ್ನು ಭಾರತಕ್ಕೆ ಕರೆತರುವ ಸಾಹಸ ಮಾಡುತ್ತಾರೆ. ಭಾರತಕ್ಕೆ ಆಕೆಯನ್ನು ಒಪ್ಪಿಸುತ್ತಾರೆ.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.