ವಿಶ್ವಾಸಮತ ಬಗ್ಗೆ ಇಂದು ಸುಪ್ರೀಂ ವಿಚಾರಣೆ

By Web DeskFirst Published Jul 23, 2019, 8:39 AM IST
Highlights

ವಿಶ್ವಾಸಮತ ಬಗ್ಗೆ ಇಂದು ಸುಪ್ರೀಂ ವಿಚಾರಣೆ| ಶಾಸಕರಾದ ನಾಗೇಶ್‌, ಶಂಕರ್‌ ಸಲ್ಲಿಸಿರುವ ಅರ್ಜಿ| ನಿನ್ನೆಯೇ ವಿಚಾರಣೆಗೆ ಕೋರ್ಟ್‌ ನಕಾರ

ನವದೆಹಲಿ[ಜು.23]: ರಾಜ್ಯದ ಮೈತ್ರಿ ಸರ್ಕಾರಕ್ಕೆ ಸೋಮವಾರ ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಪಕ್ಷೇತರ ಶಾಸಕರಾದ ನಾಗೇಶ್‌, ಕೆಪಿಜೆಪಿಯ ಶಂಕರ್‌ ಅವರು ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ ಮುಂದೆ ಮಂಗಳವಾರ ವಿಚಾರಣೆಗೆ ಬರಲಿದೆ.

ತಮ್ಮ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು ಎಂದು ಪಕ್ಷೇತರರ ಪರ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾ| ದೀಪಕ್‌ ಗುಪ್ತಾ, ನ್ಯಾ| ಅನಿರುದ್ಧ ಬೋಸ್‌ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ಮನವಿ ಮಾಡಿದರು. ಕರ್ನಾಟಕ ವಿಧಾನ ಸಭೆಯಲ್ಲಿ ಜು.18ಕ್ಕೆ ನಿಗದಿಯಾಗಿದ್ದ ವಿಶ್ವಾಸಮತ ಯಾಚನೆ ಇನ್ನೂ ನಡೆದಿಲ್ಲ. ಆದ್ದರಿಂದ ಇಂದೇ(ಸೋಮವಾರ) ವಿಶ್ವಾಸ ಮತ ಯಾಚನೆಗೆ ನಿರ್ದೇಶನ ನೀಡಬೇಕು. ಇದಕ್ಕಾಗಿ ನಾವು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ಎಂದು ಕೋರಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಈಗ ವಿಚಾರಣೆ ನಡೆಸುವುದು ಅಸಾಧ್ಯ ಎಂದು ನ್ಯಾ| ರಂಜನ್‌ ಗೊಗೊಯ್ ಹೇಳಿದರು. ಆಗ ರೋಹಟ್ಗಿ, ಕಳೆದ ವರ್ಷ ಕರ್ನಾಟಕದ ಪ್ರಕರಣದಲ್ಲೇ ಸುಪ್ರೀಂ ಕೋರ್ಟ್‌ 24 ಗಂಟೆಯೊಳಗೆ ವಿಶ್ವಾಸ ಮತ ಯಾಚನೆಗೆ ಸೂಚಿಸಿತ್ತು. ಇಂತಹದ್ದೆ ಆದೇಶವನ್ನು ಈಗಲೂ ನೀಡಿ ಎಂದು ಮನವಿ ಮಾಡಿದರು. ಆದರೆ ಮುಖ್ಯ ನ್ಯಾಯಮೂರ್ತಿಗಳು ಒಪ್ಪಲಿಲ್ಲ. ತಕ್ಷಣವೇ ಮಂಗಳವಾರ ಕಲಾಪದ ಪಟ್ಟಿಯಲ್ಲಿ ಮೊದಲ ಕೇಸ್‌ ಆಗಿ ಈ ಅರ್ಜಿಯನ್ನು ತೆಗೆದುಕೊಳ್ಳಿ ಎಂದು ರೋಹಟ್ಗಿ ವಿನಂತಿಸಿಕೊಂಡಾಗ ‘ನೋಡೋಣ’ ಎಂದು ನ್ಯಾ| ಗೊಗೊಯ್‌ ಹೇಳಿದರು. ಆ ಬಳಿಕ ಸುಪ್ರೀಂ ಕೋರ್ಟ್‌ನ ಮಂಗಳವಾರದ ಕಲಾಪದ ಪಟ್ಟಿಯಲ್ಲಿ ಪಕ್ಷೇತರ ಶಾಸಕರ ಅರ್ಜಿ ಮೊದಲನೆಯದಾಗಿ ವಿಚಾರಣೆಗೆ ಸೇರ್ಪಡೆಗೊಳಿಸಲಾಗಿದೆ.

click me!