
ನವದೆಹಲಿ(ನ.11): ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಾಟ್ಜು ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಯಾಗಿದೆ. ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪು ಟೀಕಿಸಿ ನ್ಯಾ. ಕಾಟ್ಜು ಪ್ರಕಟಿಸಿದ್ದ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿ ಹಾಜರಾಗುವಂತೆ ಕೋರ್ಟ್ ಅವರನ್ನು ವಿನಂತಿಸಿತ್ತು. ಆದರೆ ಶುಕ್ರವಾರ ನ್ಯಾ. ಕಾಟ್ಜು ಕೋರ್ಟ್‌ಗೆ ಹಾಜರಾಗುತ್ತಿದಂತೆ, ನಾಟಕೀಯ ಬೆಳವಣಿಗೆಗಳು ನಡೆದು, ಅವರನ್ನು ಕೋರ್ಟ್ ರೂಂನಿಂದಲೇ ಹೊರ ಕಳುಹಿಸಲಾದ ಘಟನೆ ನಡೆದಿದೆ.
ನ್ಯಾ. ಕಾಟ್ಜು ನ್ಯಾಯಮೂರ್ತಿಗಳ ವಿರುದ್ಧ ಅಂಕೆಯಿಲ್ಲದ ಭಾಷೆಯಲ್ಲಿ ಬಳಸಿದ್ದ ಆಪಾದನೆಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಾಗಿದೆ. ನ್ಯಾ. ಕಾಟ್ಜುರವರ ಬ್ಲಾಗ್‌ನಲ್ಲಿನ ಹೇಳಿಕೆಗಳು ನ್ಯಾಯಮೂರ್ತಿಗಳ ಮೇಲೆ ಗಂಭೀರ ಆಕ್ರಮಣವಾಗಿತ್ತು, ಅದು ತೀರ್ಪಿನ ಕುರಿತಾಗಿರಲಿಲ್ಲ’’ ಎಂದು ಕೋರ್ಟ್ ಹೇಳಿದೆ.
ಕೋರ್ಟ್ ರೂಂನಲ್ಲಿ ವಾಗ್ವಾದ ತೀವ್ರಗೊಂಡಾಗ ನ್ಯಾ. ರಂಜನ್ ಗೊಗೊಯಿ ಭದ್ರತಾ ಸಿಬ್ಬಂದಿ ಕರೆಸಿ, ನ್ಯಾ. ಕಾಟ್ಜುರನ್ನು ಹೊರ ಕಳುಹಿಸಲು ಸೂಚಿಸಿದರು. ಕೋರ್ಟ್ ರೂಂನಿಂದ ಹೊರ ನಡೆಯಲು ಸೂಚಿಸಿದಾಗ ನ್ಯಾ. ಕಾಟ್ಜು ಆಕ್ಷೇಪ ವ್ಯಕ್ತಪಡಿಸಿದರು. ‘‘ಇದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರ ಜೊತೆ ನಡೆದುಕೊಳ್ಳುವ ಸರಿಯಾದ ವಿಧಾನವಲ್ಲ’’ ಎಂದು ಅವರು ತಿಳಿಸಿದ್ದಾರೆ. ನ್ಯಾಯಮೂರ್ತಿಗಳಾದ ಪಿಸಿ ಪಂತ್, ಯುಯು ಲಲಿತ್ ಕೂಡ ಇದ್ದ ನ್ಯಾಯಪೀಠದಲ್ಲಿ ನ್ಯಾ. ಗೊಗೊಯಿ ಮತ್ತು ನ್ಯಾ. ಕಾಟ್ಜು ನಡುವೆ ಮಾತಿನ ಚಕಮಕಿ ನಡೆದಿತ್ತು. ‘‘ನೀವು ನಮ್ಮನ್ನು ಪ್ರಚೋದಿಸಬೇಡಿ’’ ಎಂದು ನ್ಯಾ. ಗೊಗೊಯಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಕಾಟ್ಜು, ಈ ರೀತಿಯ ಬೆದರಿಕೆಯಿಂದ ನೀವು ನನ್ನನ್ನು ಪ್ರಚೋದಿಸುತ್ತಿದ್ದೀರಿ ಎಂದರು. ಅದಕ್ಕೆ ಪ್ರತಿಯಾಗಿ ನ್ಯಾ. ಗೊಗೊಯಿ, ಭದ್ರತಾ ಸಿಬ್ಬಂದಿಯನ್ನು ಕರೆಸಿ ಕಾಟ್ಜುರನ್ನು ಹೊರ ಕಳುಹಿಸಲು ಸೂಚಿಸಿದರು. ನ್ಯಾ. ಕಾಟ್ಜುರನ್ನು ಹೊರಕಳುಹಿಸಿದುದನ್ನು ಕೆಲವರು ನ್ಯಾಯವಾದಿಗಳೂ ವಿರೋಸಿ ಪ್ರತಿಭಟನೆ ನಡೆಸಿದರು.
ಸೌಮ್ಯಾ ಪ್ರಕರಣದ ತೀರ್ಪನ್ನು ಟೀಕಿಸಿ ಪ್ರಕಟಿಸಿದ್ದ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿ ನ್ಯಾ. ಕಾಟ್ಜುರವರನ್ನು ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಪೀಠ ವಿನಂತಿಸಿತ್ತು. ಪ್ರಕರಣದಲ್ಲಿ ಆರೋಪಿಗಳಿಗೆ ಮರಣ ದಂಡನೆಯಾಗದ ಬಗ್ಗೆ ನ್ಯಾ. ಕಾಟ್ಜು ಟೀಕಿಸಿದ್ದರು. ಪ್ರಕರಣದ ಆರೋಪಿ ಗೋವಿಂದಚಾಮಿ ವಿರುದ್ಧದ ಕೊಲೆ ಆರೋಪದಲ್ಲಿ ಖುಲಾಸೆಗೊಳಿಸಲಾಗಿರುವ ತೀರ್ಪನ್ನು ಪ್ರಶ್ನಿಸಿ ಸೌಮ್ಯಾಳ ತಾಯಿ ಮತ್ತು ಕೇರಳ ಸರ್ಕಾರ ಸಲ್ಲಿಸಿರುವ ಮರು ಪರಿಶೀಲನಾ ಮೇಲ್ಮನವಿ ಅರ್ಜಿಯನ್ನೂ ಕೋರ್ಟ್ ತಿರಸ್ಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.