ಸಿಬಿಐ ನಾಗೇಶ್ವರ ರಾವ್‌ಗೆ 1 ಲಕ್ಷ ರು. ದಂಡ, ಶಿಕ್ಷೆ!

By Web DeskFirst Published Feb 13, 2019, 8:42 AM IST
Highlights

ಸಿಬಿಐ  ಮಾಜಿ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್‌ ಹಾಗೂ ಸಂಸ್ಥೆಯ ಕಾನೂನು ಸಲಹೆಗಾರ ಎಸ್‌.ಭಾಸುರಾಮ್‌ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಲ್ಲಿ ಸುಪ್ರೀಂಕೋರ್ಟ್‌ ತಲಾ 1 ಲಕ್ಷ ರು. ದಂಡ ಹಾಗೂ ಶಿಕ್ಷೆ ವಿಧಿಸಿದೆ. 

ನವದೆಹಲಿ :  ಕೇಂದ್ರೀಯ ತನಿಖಾ ದಳ (ಸಿಬಿಐ)ದ ಮಾಜಿ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್‌ ಹಾಗೂ ಸಂಸ್ಥೆಯ ಕಾನೂನು ಸಲಹೆಗಾರ ಎಸ್‌.ಭಾಸುರಾಮ್‌ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಲ್ಲಿ ಸುಪ್ರೀಂಕೋರ್ಟ್‌ ತಲಾ 1 ಲಕ್ಷ ರು. ದಂಡ ಹಾಗೂ ಕೋರ್ಟ್‌ ಕಲಾಪ ಮುಗಿಯುವವರೆಗೆ ಕೋರ್ಟ್‌ ಹಾಲ್‌ನಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಿದೆ.

ಇತ್ತೀಚೆಗಷ್ಟೇ ಸಿಬಿಐನಲ್ಲಿ ಉನ್ನತ ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ ನಡೆದಾಗ ಕೆಲ ಅವಧಿಗೆ ನಾಗೇಶ್ವರ ರಾವ್‌ ಹಂಗಾಮಿ ನಿರ್ದೇಶಕರಾಗಿದ್ದರು. ಆಗ ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘಿಸಿ ಸಿಬಿಐ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರನ್ನು ಸಿಆರ್‌ಪಿಎಫ್‌ನ ಹೆಚ್ಚುವರಿ ಮಹಾನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಿದ್ದರು. ಬಿಹಾರದ ಹೆಣ್ಮಕ್ಕಳ ಆಶ್ರಯ ಮನೆಗಳಲ್ಲಿ ನಡೆದ ಲೈಂಗಿಕ ಶೋಷಣೆ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದ ಶರ್ಮಾ ಅವರನ್ನು ವರ್ಗಾವಣೆ ಮಾಡಬಾರದೆಂದು ಸುಪ್ರೀಂಕೋರ್ಟ್‌ನ ಆದೇಶವಿತ್ತು. ಆದರೂ ವರ್ಗಾವಣೆ ಮಾಡಿದ ಎಂ.ಎನ್‌.ರಾವ್‌ ಹಾಗೂ ಅದಕ್ಕೆ ಸಲಹೆ ನೀಡಿದ ಭಾಸುರಾಮ್‌ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಾಗಿತ್ತು.

ಮಂಗಳವಾರದ ಕಲಾಪದಲ್ಲಿ ಇಬ್ಬರೂ ಬೇಷರತ್‌ ಕ್ಷಮೆ ಯಾಚಿಸಿದರೂ ಅದನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಅವರ ಪೀಠ ಒಪ್ಪಲಿಲ್ಲ. ಮೊದಲಿಗೆ 30 ದಿನ ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದ ಪೀಠ, ನಂತರ ತಲಾ 1 ಲಕ್ಷ ರು. ದಂಡ ಹಾಗೂ ಸಂಜೆಯವರೆಗೆ ಕೋರ್ಟ್‌ನಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಿ ಪ್ರಕರಣ ಇತ್ಯರ್ಥಗೊಳಿಸಿತು. ಹೀಗಾಗಿ ಇಬ್ಬರೂ ಸಂಜೆ 4.20ರವರೆಗೆ ಕೋರ್ಟ್‌ನಲ್ಲಿ ಕುಳಿತು ಬಳಿಕ ತೆರಳಿದರು.

click me!