ಅಂಬಾನಿಗೆ ಮೋದಿ ದಲ್ಲಾಳಿ: ರಾಹುಲ್ ಗಾಂಧಿ

By Web DeskFirst Published Feb 13, 2019, 8:30 AM IST
Highlights

ಮೋದಿ ಅಂಬಾನಿಗೆ ದಲ್ಲಾಳಿ, ದೇಶದ್ರೋಹಿ: ರಾಹುಲ್‌| ರಫೇಲ್‌ ಡೀಲ್‌ನಲ್ಲಿ ಅನಿಲ್‌ ಅಂಬಾನಿಗೆ ಪ್ರಧಾನಿ ಮಧ್ಯವರ್ತಿ| 3 ವರ್ಷ ಹಿಂದಿನ ಇ-ಮೇಲ್‌ ಬಿಡುಗಡೆ ಮಾಡಿ ಗಂಭೀರ ಆರೋಪ| ರಾಹುಲ್‌ ಆರೋಪ ನಾಚಿಕೆಗೇಡು, ಬೇಜವಾಬ್ದಾರಿಯ ಪರಮಾವಧಿ: ಬಿಜೆಪಿ| ಇದು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಇ-ಮೇಲ್‌ ಅಲ್ಲ: ರಿಲಯನ್ಸ್‌

ನವದೆಹಲಿ[ಫೆ.13]: ರಫೇಲ್‌ ಯುದ್ಧವಿಮಾನ ಖರೀದಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿಯನ್ನು ಇನ್ನಷ್ಟುತೀವ್ರಗೊಳಿಸಿದ್ದು, ಮೋದಿ ಅವರನ್ನು ರಿಲಯನ್ಸ್‌ ಕಂಪನಿ ಮಾಲಿಕ ಅನಿಲ್‌ ಅಂಬಾನಿಯ ದಲ್ಲಾಳಿ ಹಾಗೂ ದೇಶದ್ರೋಹಿ ಎಂದು ಕರೆದಿದ್ದಾರೆ. ಫ್ರಾನ್ಸ್‌ ಜೊತೆಗೆ ಭಾರತವು ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದ ಮಾಡಿಕೊಳ್ಳುವುದಕ್ಕೂ ಮೊದಲೇ ಇದರ ಗುತ್ತಿಗೆ ತಮಗೆ ಸಿಗಲಿದೆ ಎಂಬುದು ಅನಿಲ್‌ ಅಂಬಾನಿಗೆ ತಿಳಿದಿತ್ತು ಎಂಬರ್ಥದ 2015ರ ಇ-ಮೇಲ್‌ ಒಂದನ್ನು ಬಿಡುಗಡೆ ಮಾಡಿ ಈ ಆರೋಪ ಮಾಡಿರುವ ರಾಹುಲ್‌, ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘಿಸಿರುವ ಪ್ರಧಾನಿ ಜೈಲಿಗೆ ಹೋಗಲು ಯೋಗ್ಯರು ಎಂದು ಕಿಡಿ ಕಾರಿದ್ದಾರೆ.

ರಾಹುಲ್‌ ಗಾಂಧಿಯವರ ಈ ಆರೋಪವನ್ನು ನಾಚಿಕೆಗೇಡಿತನ ಹಾಗೂ ಬೇಜವಾಬ್ದಾರಿತನದ ಪರಮಾವಧಿ ಎಂದು ಕರೆದಿರುವ ಬಿಜೆಪಿ, ರಾಹುಲ್‌ ತೋರಿಸಿರುವ ಇ-ಮೇಲ್‌ ರಫೇಲ್‌ ಯುದ್ಧವಿಮಾನ ಒಪ್ಪಂದಕ್ಕೆ ಸಂಬಂಧಿಸಿದ್ದೇ ಅಲ್ಲ. ಅದು ಬೇರಾವುದೋ ಹೆಲಿಕಾಪ್ಟರ್‌ ಖರೀದಿಗೆ ಸಂಬಂಧಿಸಿದ್ದು ಎಂದು ಸ್ಪಷ್ಟಪಡಿಸಿದೆ. ರಿಲಯನ್ಸ್‌ ಡಿಫೆನ್ಸ್‌ ಕಂಪನಿ ಕೂಡ ರಾಹುಲ್‌ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ರಾಹುಲ್‌ ತೋರಿಸಿದ ಇ-ಮೇಲ್‌ಗೂ ರಫೇಲ್‌ ಡೀಲ್‌ಗೂ ಸಂಬಂಧವಿಲ್ಲ ಎಂದು ಹೇಳಿದೆ.

ಅಂಬಾನಿಗೆ ರಹಸ್ಯ ಹೇಳಿದ್ದು ಯಾರು:

ಏರ್‌ಬಸ್‌ನ ಅಧಿಕಾರಿಯೊಬ್ಬರು ‘ಅಂಬಾನಿ’ ಎಂಬ ವಿಷಯದಡಿ 2015ರ ಮಾಚ್‌ರ್‍ 28ರಂದು ಮೂವರಿಗೆ ಬರೆದ ಇ-ಮೇಲ್‌ ಅನ್ನು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ರಾಹುಲ್‌, ಈ ಇ-ಮೇಲ್‌ನಲ್ಲಿ ಅನಿಲ್‌ ಅಂಬಾನಿ ರಫೇಲ್‌ ಯುದ್ಧವಿಮಾನ ಒಪ್ಪಂದಕ್ಕೂ 10 ದಿನ ಮೊದಲು ಫ್ರಾನ್ಸ್‌ಗೆ ತೆರಳಿಗೆ ಅಲ್ಲಿನ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ವಿವರಗಳಿವೆ. ಜೊತೆಗೆ, ಈ ಕುರಿತು ಒಪ್ಪಂದ ಸಿದ್ಧಗೊಳ್ಳುತ್ತಿದ್ದು, ಪ್ರಧಾನಿ ಫ್ರಾನ್ಸ್‌ಗೆ ಭೇಟಿ ನೀಡುವ ವೇಳೆ ಒಪ್ಪಂದಕ್ಕೆ ಸಹಿ ಹಾಕುತ್ತೇನೆ ಎಂದು ಅನಿಲ್‌ ಹೇಳಿದ್ದಾರೆ. ರಫೇಲ್‌ ಒಪ್ಪಂದ ರಾಷ್ಟ್ರೀಯ ರಹಸ್ಯವಾಗಿದ್ದು, ಒಪ್ಪಂದಕ್ಕೂ ಮೊದಲು ಅದರ ಬಗ್ಗೆ ಅಂದಿನ ರಕ್ಷಣಾ ಸಚಿವ ಮನೋಹರ ಪರ್ರಿಕರ್‌ಗೂ ತಿಳಿದಿರಲಿಲ್ಲ. ಪ್ರಧಾನಿಗೆ ಮಾತ್ರ ಅದರ ಬಗ್ಗೆ ಗೊತ್ತಿತ್ತು. ಹೀಗಾಗಿ ಅನಿಲ್‌ ಅಂಬಾನಿಗೆ ಇದನ್ನು ಹೇಳಿದವರು ಪ್ರಧಾನಿಯೇ. ಅವರು ರಫೇಲ್‌ ಒಪ್ಪಂದದಲ್ಲಿ ಅಂಬಾನಿಯ ಮಧ್ಯವರ್ತಿಯಂತೆ ಕೆಲಸ ಮಾಡಿ ದೇಶದ್ರೋಹ ಎಸಗಿದ್ದಾರೆ. ಅವರು ಮಾಡಿರುವುದು ವಿದೇಶಿ ಬೇಹುಗಾರರು ಮಾಡುವ ಕೆಲಸ. ಈ ಅಪರಾಧಕ್ಕಾಗಿ ಮೋದಿ ಜೈಲಿಗೆ ಹೋಗಬೇಕು ಎಂದು ಕಿಡಿ ಕಾರಿದರು.

ಮೋದಿ ಭ್ರಷ್ಟಎಂಬ ಬಗ್ಗೆ ಯಾರಿಗೂ ಅನುಮಾನವಿಲ್ಲ. ಇಷ್ಟುದಿನ ರಫೇಲ್‌ ಹಗರಣ ಕೇವಲ ಭ್ರಷ್ಟಾಚಾರ ಹಾಗೂ ನಿರ್ಧಾರ ಕೈಗೊಳ್ಳುವಲ್ಲಿ ಮಾಡಿದ ತಪ್ಪು ಎಂಬ ಭಾವನೆಯಿತ್ತು. ಆದರೆ ಈಗ ಇದು ಇನ್ನಷ್ಟುಗಂಭೀರ ಹಗರಣವಾಗಿ ಪರಿಣಮಿಸಿದೆ. ದೇಶದ ರಕ್ಷಣಾ ರಹಸ್ಯವನ್ನು ಸೋರಿಕೆ ಮಾಡಿ ದೊಡ್ಡ ಅಪರಾಧವನ್ನು ಪ್ರಧಾನಿ ಎಸಗಿದ್ದಾರೆ ಎಂದು ಹೇಳಿದರು.

ನಾಚಿಕೆಗೇಡಿತನದ ಪರಮಾವಧಿ-ಬಿಜೆಪಿ:

ರಾಹುಲ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಕಾಂಗ್ರೆಸ್‌ ಅಧ್ಯಕ್ಷರು ಪ್ರದರ್ಶಿಸಿದ ಇ-ಮೇಲ್‌ಗೂ ರಫೇಲ್‌ಗೂ ಯಾವುದೇ ಸಂಬಂಧವಿಲ್ಲ. ಇದು ಏರ್‌ಬಸ್‌ನ ಆಂತರಿಕ ಇಮೇಲ್‌ ಆಗಿದ್ದು, ಇದನ್ನು ರಾಹುಲ್‌ ಹೇಗೆ ಪಡೆದುಕೊಂಡರು? ವಿದೇಶಿ ಕಂಪನಿಗಳಿಗೆ ರಾಹುಲ್‌ ‘ಲಾಬಿಗಾರ’ನಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟಕ್ಕೂ ಅವರು ಪ್ರದರ್ಶಿಸಿದ ಇಮೇಲ್‌ ಏರ್‌ಬಸ್‌ ಹೆಲಿಕಾಪ್ಟರ್‌ಗೆ ಸಂಬಂಧಿಸಿದ್ದೇ ಹೊರತು ರಫೇಲ್‌ ಯುದ್ಧವಿಮಾನಕ್ಕೆ ಸಂಬಂಧಿಸಿದ್ದಲ್ಲ. ತಪ್ಪು ಇ-ಮೇಲ್‌ ಇರಿಸಿಕೊಂಡು ಪ್ರಧಾನಿಯನ್ನು ದಲ್ಲಾಳಿ ಹಾಗೂ ದೇಶದ್ರೋಹಿ ಎಂದು ಕರೆಯುವುದು ನಾಚಿಕೆಗೇಡಿತನದ ಹಾಗೂ ಬೇಜವಾಬ್ದಾರಿತನದ ಪರಮಾವಧಿ. ಜನರ ಮುಂದೆ ನಾವು ರಾಹುಲ್‌ರ ಸುಳ್ಳುಗಳನ್ನು ಬಯಲಿಗೆಳೆಯುತ್ತೇವೆ ಎಂದು ಹೇಳಿದರು.

ರಫೇಲ್‌ ಇ-ಮೇಲ್‌ ಅಲ್ಲ-ರಿಲಯನ್ಸ್‌:

ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್‌ ಡಿಫೆನ್ಸ್‌ ಕಂಪನಿ, ರಾಹುಲ್‌ ಗಾಂಧಿ ಪ್ರದರ್ಶಿಸಿರುವ ಇ-ಮೇಲ್‌ ಏರ್‌ಬಸ್‌ ಕಂಪನಿಯ ಜೊತೆ ಹೆಲಿಕಾಪ್ಟರ್‌ ತಯಾರಿಕೆಯಲ್ಲಿ ರಿಲಯನ್ಸ್‌ ಸಹಕಾರ ನೀಡುವ ಕುರಿತಾದದ್ದೇ ಹೊರತು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ್ದಲ್ಲ. ಮೇಕ್‌ ಇನ್‌ ಇಂಡಿಯಾ ಅಡಿ ಏರ್‌ಬಸ್‌ ಹಾಗೂ ರಿಲಯನ್ಸ್‌ ಡಿಫೆನ್ಸ್‌ ಕಂಪನಿಗಳು ನಾಗರಿಕ ಹಾಗೂ ರಕ್ಷಣಾ ಹೆಲಿಕಾಪ್ಟರ್‌ಗಳನ್ನು ತಯಾರಿಸುವ ಬಗ್ಗೆ ಮಾತುಕತೆ ನಡೆಸಿದ ಇ-ಮೇಲ್‌ ಇದು. ಇದಕ್ಕೂ ಕೇಂದ್ರ ಸರ್ಕಾರ ಫ್ರಾನ್ಸ್‌ ಜೊತೆ ಮಾಡಿಕೊಂಡ ಒಪ್ಪಂದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

click me!