ಕೇಂದ್ರದ ‘ಕಾವೇರಿ ಸ್ಕೀಮ್‘ಗೆ ಸುಪ್ರೀಂ ಒಪ್ಪಿಗೆ

First Published May 18, 2018, 3:25 PM IST
Highlights
  • 35 ಪುಟಗಳ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ
  • ಜೂನ್ 1 ರೊಳಗೆ ಕಾವೇರಿ ಪ್ರಾಧಿಕಾರ ಜಾರಿಗೆ

ನವದೆಹಲಿ: ಕೇಂದ್ರ ಸರ್ಕಾರ ಸಲ್ಲಿಸಿರುವ ‘ಕಾವೇರಿ ಸ್ಕೀಮ್’ ಕರಡನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಕೊ‍ಂಡಿದೆ. ಆ ಮೂಲಕ, ಕಾವೇರಿ ಸೀಮೆಯ ನೀರಿನ ಸಂಪೂರ್ಣ ಹೊಣೆ ಇನ್ಮುಂದೆ ಪ್ರಾಧಿಕಾರದ ಕೈಯಲ್ಲಿರಲಿದೆ.

35 ಪುಟಗಳ ತೀರ್ಪು ಪ್ರಕಟಿಸಿದ ನ್ಯಾ. ದೀಪಕ್ ಮಿಶ್ರಾ, ನ್ಯಾ. ಎ ಎಂ ಖಾನ್ವೀಳ್ಕರ್ ಮತ್ತು ನ್ಯಾ. ಡಿ ವೈ ಚಂದ್ರಚೂಡ್ ಅವರ ನ್ಯಾಯಪೀಠ, ಜೂನ್ 1 ರೊಳಗೆ ಕಾವೇರಿ ಪ್ರಾಧಿಕಾರ ಜಾರಿಗೆ ಬರಬೇಕು ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ಪೀಠದ ಮುಂದೆ ಗುರುವಾರ ಹಾಜರಾಗಿದ್ದ ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್,  ಕಾವೇರಿ ಸ್ಕೀಮ್ ಬಗ್ಗೆ ರಾಜ್ಯದ ಸಲಹೆಗಳನ್ನು ಸಲ್ಲಿಸಿದ್ದರು.

ಕಾವೇರಿ ವಿವಾದದ ಬಗ್ಗೆ ಕಳೆದ ಫೆ.16ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, 6 ವಾರಗಳೊಳಗೆ ಕಾವೇರಿ ನೀರು ಹಂಚಿಕೆಯ ಬಗ್ಗೆ, ಕಾವೇರಿ ನಿರ್ವಹಣಾ ಮಂಡಳಿಯನ್ನೊಳಗೊಂಡ ’ಕಾವೇರಿ ನಿರ್ವಹಣಾ ಯೋಜನೆ’ಯನ್ನು ರೂಪಿಸಲು ಸೂಚಿಸಿತ್ತು. 

ಕಾವೇರಿ ನದಿ ನೀರನ್ನು ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳು, ಯಾವ್ಯಾವ ಪರಿಸ್ಥಿತಿಯಲ್ಲಿ ಹೇಗೇಗೆ ಹಂಚಿಕೊಳ್ಳಬೇಕು ಎಂಬುವುದನ್ನು  ‘ಕಾವೇರಿ ಸ್ಕೀಮ್’ ನಿರ್ವಹಿಸುವುದು.  

click me!