ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇಸಿಗೆ ಮಳೆ : ಮೂರು ಬಲಿ

By Web DeskFirst Published Apr 12, 2019, 7:47 AM IST
Highlights

ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬೇಸಿಗೆ ಮಳೆ ಸುರಿದಿದೆ. ಬಿಸಿಲಿನ ಬೇಗೆಗೆ ಕಾದು ಕೆಂಡವಾಗಿದ್ದ ಭೂಮಿಗೆ ತಂಪೆರೆದಿದೆ.

ಬೆಂಗಳೂರು: ರಾಜ್ಯದ ವಿವಿಧೆಡೆ ವರ್ಷಧಾರೆ ಮುಂದುವರೆದಿದ್ದು, ಬುಧವಾರ ರಾತ್ರಿಯಿಂದಾಚೆಗೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದರೆ, ಮಳೆ-ಗಾಳಿಯ ಆರ್ಭಟಕ್ಕೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು 8 ವರ್ಷದ ಬಾಲಕನೋರ್ವ ಕೊನೆಯುಸಿರೆಳೆದಿದ್ದಾನೆ.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬೆಣ್ಣಿಹಳ್ಳದ ಬಳಿಯ ಹೊಲದಲ್ಲಿ ಗುರುವಾರ ಕುರಿ ಮೇಯಿಸುತ್ತಿದ್ದ ಕೊಪ್ಪಳ ಜಿಲ್ಲೆ ಹನುಮಸಾಗರದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಮೃತರಾಗಿದ್ದಾರೆ. ಅವರ ಜೊತೆ ಇದ್ದ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಬುಧವಾರ ರಾತ್ರಿ ಸಿಡಿಲು ಬಡಿದು ಯಾದಗಿರಿ ಜಿಲ್ಲೆಯ ಕೊಡೇಕಲ್‌ ಪಟ್ಟಣದ ಹೊರವಲಯದಲ್ಲಿ ವಾಸವಾಗಿದ್ದ ದೇವಿಂದ್ರಪ್ಪ ಲಕ್ಕುಂಡಿ (58) ಎಂಬ ರೈತ ಮೃತಪಟ್ಟಿದ್ದಾನೆ. ಪಟ್ಟಣದ ಹೊರವಲಯದ ಜಮೀನಿನಲ್ಲಿ ವಾಸವಿದ್ದ ದೇವಿಂದ್ರಪ್ಪ, ಮಳೆಯಲ್ಲಿ ನೆನೆಯುತ್ತಿದ್ದ ಕುರಿ ಮರಿಗಳನ್ನು ತರಲು ಹೋದ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೆಗ್ಗಿನಹಳ್ಳಿಯಲ್ಲಿ ಸಿಡಿಲು ಬಡಿದು ಬುಧವಾರ ರಾತ್ರಿ 15 ಕುರಿಗಳು ಮೃತಪಟ್ಟಿವೆ.

ಬಾಲಕ ಬಲಿ:  ಬುಧವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಗಾಳಿಯ ಆರ್ಭಟಕ್ಕೆ ತುಂಡಾಗಿ ಬಿದಿದ್ದ, ವಿದ್ಯುತ್‌ ತಂತಿ ತುಳಿದು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿವಪುರ ತಾಂಡಾದ ದಿಗಂತ ರಮೇಶ ನಾಯಕ (8) ಎಂಬ 2ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಇನ್ನುಳಿದಂತೆ ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ತುಮಕೂರು, ಹಾವೇರಿ ಸೇರಿದಂತೆ ರಾಜ್ಯದ ವಿವಿಧೆ ಉತ್ತಮ ಮಳೆಯಾಗಿದೆ.

click me!