
ಬೆಂಗಳೂರು[ಆ.07]: ಪ್ರಸಿದ್ದ ಕವಿ, ಬರಹಗಾರ, ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಡಾ. ಸುಮತೀಂದ್ರ ನಾಡಿಗ್ [83] ಅವರು ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ.
ತೀವ್ರ ಎದೆನೋವು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 6.30 ಕ್ಕೆ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಮೇ 4, 1935ರಂದು ಜನಿಸಿದ ನಾಡಿಗರು ಮೈಸೂರು ವಿವಿ ಮತ್ತು ಅಮೆರಿಕದ ಫಿಲೆಡೆಲ್ಫಿಯಾ ವಿಶ್ವವಿದ್ಯಾಲಯಗಳಿಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಪಡೆದರು. 1985ರಲ್ಲಿ, 'ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ಎಂಬ ವಿಷಯಕ್ಕಾಗಿ ಬೆಂಗಳೂರು ವಿವಿಯು ಗೌರವ ಡಾಕ್ಟರೇಟ್ ನೀಡಿತ್ತು.
ಹಲವು ಕಾವ್ಯ, ವಿಮರ್ಶೆಗಳ ರಚನೆ
ಜಡ ಮತ್ತು ಚೇತನ,ಪಂಚಭೂತಗಳು,ನಟರಾಜ ಕಂಡ ಕಾಮನಬಿಲ್ಲು,ಕುಹೂ ಗೀತ,ತಮಾಷೆ ಪದ್ಯಗಳು,ದಾಂಪತ್ಯ ಗೀತ,ಭಾವಲೋಕ,ಉದ್ಘಾಟನೆ, ಕಪ್ಪು ದೇವತೆ ನಾಡಿಗರ ಪ್ರಮುಖ ಕವನ ಸಂಕಲನಗಳು. ಇದರ ಜೊತೆ ಹಲವು ವಿಷಯಗಳ ಮೇಲೆ ಸಾಹಿತ್ಯ ವಿಮರ್ಶೆ ಹಾಗೂ ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ವಿಶೇಷವಾದ ಅಧ್ಯಯನ ನಡೆಸಿದ್ದರು.
ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಅಧ್ಯಕ್ಷ
ನಾಡಿಗರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರಕಿವೆ.1996-1999ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ಅಧ್ಯಕ್ಷರಾಗಿದ್ದರು. ನಾಡಿಗರ ಸಾಹಿತ್ಯ ಸಾಧನೆಗಾಗಿ ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.