ಮಂಡ್ಯ ರೈತರ ಪರ ಕೇಂದ್ರದ ಮೊರೆ ಹೋದ ಸಂಸದೆ ಸುಮಲತಾ

By Web DeskFirst Published Jun 21, 2019, 8:24 AM IST
Highlights

ಸಂಸದೆಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತಿದ್ದಂತೆ ಸುಮಲತಾ ಅಂಬರೀಶ್ ಮಂಡ್ಯ ರೈತರ ಪರವಾಗಿ ಕೇಂದ್ರದ ಮೊರೆ ಹೋಗಿದ್ದಾರೆ.

ಮಂಡ್ಯ [ಜೂ.21]: ಬೆಳೆದು ನಿಂತ ಬೆಳೆಗಳಿಗೆ ನೀರಿಲ್ಲದೇ ರೈತರು ಪರಿತಪಿಸುತ್ತಿದ್ದಾರೆ. ಕೂಡಲೇ ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುವ ಮೂಲಕ ಬೆಳೆಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಂಸದೆ ಸುಮಲತಾ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ಗೆ ಮನವಿ ನೀಡಿದ್ದಾರೆ.

ಪೂರ್ವ ಮುಂಗಾರು ಕೊರತೆಯಿಂದ ರೈತರು ಭೂಮಿಯನ್ನು ಹದಗೊಳಿಸಲು ಸಾಧ್ಯವಾಗಿಲ್ಲ. ಮುಂಗಾರು ಮಳೆಯೂ ಸಕಾಲಕ್ಕೆ ಬಾರದೆ ಬರದ ಛಾಯೆ ಆವರಿಸಿದೆ. ರೈತರು ಬೆಳೆದು ನಿಂತ ಬೆಳೆಗಳಿಗೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಬೆಳೆಗಳ ರಕ್ಷಣೆಗೆ ತಕ್ಷಣವೇ ನೀರಿನ ಅಗತ್ಯವಿದೆ. ಕೂಡಲೇ ಕೃಷ್ಣರಾಜಸಾಗರ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುವ ಮೂಲಕ ಬೆಳೆಗಳನ್ನು ಸಂರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.

ಕಾವೇರಿ ನೀರು ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ನೀರು ಬಿಡುಗಡೆಗೆ ಸೂಚನೆ ನೀಡುವಂತೆ ಕೋರಿದ್ದಾರೆ. ಮನವಿ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಜಲಸಂಪನ್ಮೂಲ ಸಚಿವರು ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಕೇಂದ್ರ ಸಚಿವ ಸದಾನಂದಗೌಡ ಅವರನ್ನೂ ಭೇಟಿಯಾಗಿ ಕಾವೇರಿ ಕೊಳ್ಳದ ನೀರಿನ ಸಮಸ್ಯೆ ಕುರಿತು ವಿವರಿಸಿ ರೈತರ ಜಮೀನಿಗೆ ನೀರು ಬಿಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

click me!