ಜಿಎಸ್‌ಟಿ ಪಾವತಿದಾರರಿಗೆ ವಿಶ್ವದ ಅತ್ಯಂತ ಅಗ್ಗದ ಆ್ಯಪ್‌

By Suvarna Web DeskFirst Published Jun 23, 2017, 11:38 AM IST
Highlights

ಜಿಎಸ್'ಟಿ ಮತ್ತು ಅಕೌಂಟಿಂಗ್‌ ಬಗ್ಗೆ ಅರಿವಿಲ್ಲದ ಶ್ರೀಸಾಮಾನ್ಯರೂ ಬಳಕೆ ಮಾಡಬಹುದಾದ ಮತ್ತು ಅಗ್ಗದ ದರದಲ್ಲಿ ತೆರಿಗೆ ಪಾವತಿ ಮಾಡಬಹುದಾದಂತಹ ವಿಶ್ವದ ಅತಿ ಅಗ್ಗದ ಜಿಎಸ್‌ಟಿ ತಂತ್ರಾಂಶವನ್ನು ಬಿಡುಗಡೆಯಾಗಿದೆ.

ಮೈಸೂರು: ಜಿಎಸ್'ಟಿ ಮತ್ತು ಅಕೌಂಟಿಂಗ್‌ ಬಗ್ಗೆ ಅರಿವಿಲ್ಲದ ಶ್ರೀಸಾಮಾನ್ಯರೂ ಬಳಕೆ ಮಾಡಬಹುದಾದ ಮತ್ತು ಅಗ್ಗದ ದರದಲ್ಲಿ ತೆರಿಗೆ ಪಾವತಿ ಮಾಡಬಹುದಾದಂತಹ ವಿಶ್ವದ ಅತಿ ಅಗ್ಗದ ಜಿಎಸ್‌ಟಿ ತಂತ್ರಾಂಶವನ್ನು ಬಿಡುಗಡೆಯಾಗಿದೆ.

ಮಂಡ್ಯ ಪಿಇಎಸ್‌ ತಾಂತ್ರಿಕ ಕಾಲೇಜಿನ ಅಂತಿಮ ಸೆಮಿಸ್ಟರ್‌ನ ಜಿ.ಸಿ. ಶೈಲಜಾ ಮತ್ತು ಜಿ.ರಾಕೇಶ್‌ ಎಂಬ ವಿದ್ಯಾರ್ಥಿ ಗಳು ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ಡಾ.ಆರ್‌. ಗಿರೀಶ್‌ ಅವರ ಮಾರ್ಗದರ್ಶನದಲ್ಲಿ ‘ಕುಬೇರ' ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದ್ದು ಮೈಸೂರಿನ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾಯಿತು. ಇಂಟರ್‌ನೆಟ್‌ ಸಂಪರ್ಕ ಇಲ್ಲದೆಯೂ ಕಾರ್ಯನಿರ್ವಹಿಸುವ ಇದು, ಅಕೌಂಟಿಂಗ್‌ ಕೇತ್ರದ ಎಲ್ಲಾ ಸವಾಲುಗಳಿಗೆ ಉತ್ತರ ನೀಡುತ್ತದೆ. ಈಗಾಗಲೇ ಈ ಆ್ಯಪ್‌ಗೆ 6 ಜಾಗತಿಕ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ.

ಕೈಗಾರಿಕೆ, ಉದ್ದಿಮೆ ಹಾಗೂ ಇತರ ವಹಿವಾಟುಗಳ ಅಭಿವೃದ್ಧಿಗೆ ಈ ಆ್ಯಪ್‌ ಪೂರಕವಾಗಿರುವುದಿಂದ, ಈ ಆ್ಯಪ್‌ಗೆ ಕುಬೇರ ಎಂದು ಹೆಸರಿಡಲಾಗಿದೆ. ಸಿಎ ಪಂಪಣ್ಣ ಎಂಬುವರು ಸಲಹೆಗಾರರಾಗಿದ್ದಾರೆ. ವಸ್ತುಗಳ ಖರೀದಿ, ನಿರ್ವಹಣೆ, ಉತ್ಪಾದನೆಯ ಮೇಲ್ವಿಚಾರಣೆ, ಕ್ಲೌಡ್‌ ಬೇಸ್ಡ್‌ ದತ್ತಾಂಶ ನಿರ್ವಹಣೆ, ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ದತ್ತಾಂಶಗಳ ಲಭ್ಯತೆ, ಜಿಎಸ್‌ಟಿಗೆ ಪೂರಕ ದತ್ತಾಂಶ ನಿರ್ವಹಣೆ ಹಾಗೂ ವಿಶ್ಲೇಷಣೆಗಳು ಈ ಆ್ಯಪ್‌ನ ಮುಖ್ಯ ಲಕ್ಷಣಗಳು ಹಾಗೂ ಉಪಯೋಗಗಳು.

ಉದ್ಯಮಿಗಳಿಗೂ ಉಪಯೋಗಿ: ಅಕೌಂಟಿಂಗ್‌ ಹೊರತು ಪಡಿಸಿಯೂ ಈ ಆ್ಯಪ್‌ ವ್ಯಾಪಾರಿಗಳಿಗೆ ಹಾಗೂ ಉದ್ಯಮಿ ಗಳಿಗೆ ಇನ್ನೂ ಹಲವು ರೀತಿಯಲ್ಲಿ ಉಪಯೋಗವಾಗಲಿದೆ. 79 ಕ್ಕೂ ಅಧಿಕ ಬಗೆಯ ಉದ್ಯಮಗಳಿಗೆ ಇದು ಎಲ್ಲಾ ಮಾಹಿತಿಗಳನ್ನು ಒದಗಿಸಬಲ್ಲದು. ಉದ್ದಿಮೆಯಲ್ಲಿ ನಷ್ಟವಾಗುತ್ತಿದ್ದಂತೆ, ಎಚ್ಚರದ ಸಂದೇಶ ಕಳುಹಿಸುತ್ತಲ್ಲದೆ ಲಾಭದತ್ತ ಕೊಂಡೊಯ್ಯಲು ಅಗತ್ಯವಾದ ತಂತ್ರಗಾರಿಕೆಯನ್ನು ಕೂಡಾ ಒದಗಿಸುತ್ತದೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆ್ಯಪ್‌ಗಳ ಪೈಕಿ ‘ಕುಬೇರ' ಅತ್ಯಂತ ಅಗ್ಗ ಹಾಗೂ ಆಧುನಿಕವಾದದು. ಇದರ ಬೆಲೆ ವರ್ಷಕ್ಕೆ ಕೇವಲ ರೂ. 999 ರಿಂದ ರೂ. 4999 ಅಥವಾ ತಿಂಗಳಿಗೆ ಕೇವಲ ರೂ. 99 ರಿಂದ ರೂ.499 ತಗಲುಬಹುದು. ಕುಬೇರ ಆ್ಯಪ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈಗ ಲಭ್ಯವಿದ್ದು,  ಐಒಎಸ್‌ ಮತ್ತು ವಿಂಡೋಸ್‌ಗೆ ಸದ್ಯದಲ್ಲೆ ಬರಲಿದೆ. 

click me!