
ಬೆಂಗಳೂರು(ಆ. 09): ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್'ನ ಹವಣಿಕೆಯಲ್ಲಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಗೆದ್ದರಾದರೂ ಸೋನಿಯಾ ಆಪ್ತ ಅಹ್ಮದ್ ಪಟೇಲ್ ಗೆಲುವನ್ನು ಬಿಜೆಪಿಗೆ ತಡೆಯಲಾಗಲಿಲ್ಲ. ಅಹ್ಮದ್ ಪಟೇಲ್'ರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟ ಸೋನಿಯಾ ಗಾಂಧಿಯ ಹಠಕ್ಕೆ ಹೆಗಲು ಕೊಟ್ಟು ಸೈ ಎನಿಸಿದ್ದು ಡಿಕೆ ಶಿವಕುಮಾರ್. ಗುಜರಾತ್'ನ ಕಾಂಗ್ರೆಸ್ ಶಾಸಕರಿಗೆ ಕನಕಪುರ ಸಾಮ್ರಾಟ ಡಿಕೆಶಿ ಭದ್ರಕೋಟೆ ಒದಗಿಸದೇ ಹೋಗಿದ್ದರೆ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿಬಿಡುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಬಂದಿತ್ತಾ ಫೋನ್ ಕರೆ?
ಬಿಡದಿಯ ಈಗಲ್'ಟನ್ ರೆಸಾರ್ಟ್'ನಲ್ಲಿ ಗುಜರಾತ್ ಶಾಸಕರನ್ನು ಕರೆದುಕೊಂಡು ಬಂದ ವೇಳೆ, ಡಿಕೆ ಶಿವಕುಮಾರ್'ಗೆ ಬಿಜೆಪಿ ನಾಯಕರೊಬ್ಬರಿಂದ ದೂರವಾಣಿ ಕರೆ ಬರುತ್ತದೆ. ಗುಜರಾತ್ ಶಾಸಕರನ್ನು ಭೇಟಿಯಾಗಲು ಅವಕಾಶ ಕೊಡಿ ಎಂದು ಫೋನ್'ನಲ್ಲಿ ಆ ವ್ಯಕ್ತಿಯು ಡಿಕೆಶಿಗೆ ಮನವಿ ಮಾಡಿಕೊಳ್ಳುತ್ತಾರೆ. ಆದರೆ, ಡಿಕೆಶಿ ಬಿಲ್'ಕುಲ್ ಒಪ್ಪಿಕೊಳ್ಳೋದಿಲ್ಲ. ಯಾರೂ ಕೂಡ ರೆಸಾರ್ಟ್'ಗೆ ನುಸುಳದಂತೆ ಬಿಗಿ ಬಂದೋಬಸ್ತ್ ಮಾಡಿರುತ್ತಾರೆ ಡಿಕೆಶಿ. ಇದರಿಂದ ಹತಾಶೆಗೊಂಡ ಬಿಜೆಪಿಯ ಕೇಂದ್ರ ನಾಯಕರು ಡಿಕೆಶಿ ಮೇಲೆ ಐಟಿ ದಾಳಿ ಮಾಡಿಸುತ್ತಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪ್ರಜಾವಾಣಿ ಸೇರಿದಂತೆ ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.
ರೆಸಾರ್ಟ್'ಗೆ ಬಂದಿದ್ದ 43 ಶಾಸಕರ ಪೈಕಿ ಒಬ್ಬರು ಮಾತ್ರ ಬಿಜೆಪಿ ಅಭ್ಯರ್ಥಿ ಪರವಾಗಿ ಕ್ರಾಸ್ ವೋಟಿಂಗ್ ಮಾಡಿದ್ದಾರೆ. ಉಳಿದಂತೆ ಎಲ್ಲರೂ ತಮ್ಮ ಪಕ್ಷದ ಅಪ್ಪಣೆಯನ್ನು ಪಾಲಿಸಿದ್ದಾರೆ. ಇದಕ್ಕೆಲ್ಲಾ ಶಕ್ತಿಯಾಗಿ ನಿಂತಿದ್ದು ಡಿಕೆ ಶಿವಕುಮಾರ್. ಕಾಂಗ್ರೆಸ್ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ ಅವರು ಡಿಕೆಶಿಯ ಸಾಹಸ ಮತ್ತು ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ಮುಂದೆ ಡಿಕೆಶಿಗೆ ಸೋನಿಯಾ ಕೃಪಾಶೀರ್ವಾದ ಹೆಚ್ಚಾಗಲಿದೆ ಎಂದು ಕಾಂಗ್ರೆಸ್ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.